ಮ್ಯಾನ್ಮಾರ್: ಆಂಗ್ ಸೂಕಿಗೆ ಮತ್ತೆ 6 ವರ್ಷ ಜೈಲುಶಿಕ್ಷೆ

Update: 2022-08-15 18:13 GMT
PHOTO CREDIT: AP

ಯಾಂಗಾನ್, ಆ.15: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ ಮತ್ತೆ 6 ವರ್ಷದ ಜೈಲುಶಿಕ್ಷೆ ವಿಧಿಸಿ ಅಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಸೂಕಿ ಅವರು ತಮ್ಮ ತಾಯಿಯ ಹೆಸರಲ್ಲಿ ಸ್ಥಾಪಿಸಿದ್ದ ದತ್ತಿಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತ 4 ಪ್ರಕರಣಗಳಲ್ಲಿ ಸೂಕಿಯನ್ನು ದೋಷಿ ಎಂದು ರಾಜಧಾನಿ ನೇಪಿಡಾವ್‌ನ ಬಂದೀಖಾನೆಯ ಆವರಣದಲ್ಲಿರುವ ವಿಶೇಷ ನ್ಯಾಯಾಲಯ ಘೋಷಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ 77 ವರ್ಷದ ಸೂಕಿ ವಿರುದ್ಧದ 4ನೇ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಪ್ರಕಟಿಸಲಾಗಿದ್ದು ಈ 4 ಪ್ರಕರಣಗಳಲ್ಲಿ ಒಟ್ಟು 17 ವರ್ಷ ಜೈಲುಶಿಕ್ಷೆಯಾಗಿದೆ. 2021ರಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ವಶಪಡಿಸಿಕೊಂಡಿರುವ ಸೇನೆ ಅಧಿಕಾರದಲ್ಲಿರುವವರೆಗೆ ಸೂಕಿ ಮತ್ತೆ ರಾಜಕೀಯಕ್ಕೆ ಮರಳುವ ಸಾಧ್ಯತೆ ಬಹುತೇಕ ಕ್ಷೀಣವಾಗಿದೆ.

 ಡಾ ಕಿನ್ ಕಿ ಪ್ರತಿಷ್ಟಾನಕ್ಕೆ ಸ್ವಂತ ಕಟ್ಟಡ ಹಾಗೂ ಕಾರ್ಯಾಲಯ ಆರಂಭಿಸಲು ರಾಜಧಾನಿ ನೇಪಿಡಾವ್‌ನಲ್ಲಿ ಜಮೀನನ್ನು ಕಡಿಮೆ ಬೆಲೆಗೆ ಲೀಸ್ ನೀಡುವ ಮೂಲಕ ಸೂಕಿ ದೇಶದ ಬೊಕ್ಕಸಕ್ಕೆ ಸುಮಾರು 13 ಮಿಲಿಯನ್ ಡಾಲರ್‌ನಷ್ಟು ನಷ್ಟ ಎಸಗಿದ್ದಾರೆ ಎಂಬ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಘೋಷಿಸಿದ್ದಾರೆ. ಇದೇ ಪ್ರಕರಣದಲ್ಲಿ ನೇಪಿಡಾವ್ ನಗರದ ಮಾಜಿ ಮೇಯರ್ ಮ್ಯೊ ಆಂಗ್ ಮತ್ತು ಮಾಜಿ ಉಪಮೇಯರ್ ಯಿಮಿನ್‌ಗೆ ತಲಾ 3 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಉದ್ಯಮಿಗಳಿಂದ ಲಂಚ ಪಡೆಯಲು ಈ ಪ್ರತಿಷ್ಟಾನವನ್ನು ಸೂಕಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆದರೆ ಇದನ್ನು ಸೂಕಿ ನಿರಾಕರಿಸಿದ್ದಾರೆ. ಸರಕಾರಿ ಗೋಪ್ಯತೆ ಕಾಯ್ದೆ ಉಲ್ಲಂಘನೆ, 2020ರ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಅಧಿಕಾರದ ದುರ್ಬಳಕೆ ಸೇರಿದಂತೆ ಸೂಕಿ ವಿರುದ್ಧ ಇನ್ನೂ 9 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಎಲ್ಲಾ ಪ್ರಕರಣಗಳಲ್ಲಿ ಗರಿಷ್ಟ 122 ವರ್ಷ ಜೈಲುಶಿಕ್ಷೆಯಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News