ಕಾಲು ಸಂಕ ಕುಸಿದು ಬಿದ್ದು ಇಬ್ಬರು ಯುವಕರು ನೀರುಪಾಲು

Update: 2022-08-16 01:51 GMT

ಮನಾಲಿ: ಮನಾಲಿಯ ಸೊಲಾಂಗ್ ಕಣಿವೆ ಪ್ರದೇಶದಲ್ಲಿ ಬಿಯಾಸ್ ನದಿಯ ಉಪನದಿ ಸೊಲಾಂಗ್ ರಿವುಲೆಟ್‍ಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಕಾಲು ಸಂಕ ಕುಸಿದು ಬಿದ್ದ ಪರಿಣಾಮ, ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ.

ಕೊಚ್ಚಿಕೊಂಡು ಹೋದ ಯುವಕರು ಇನ್ನೂ ಪತ್ತೆಯಾಗಿಲ್ಲ. ಸೇತುವೆ ಕುಸಿದ ಸಂದರ್ಭ ಮೂರರಿಂದ ನಾಲ್ಕು ಮಂದಿ ಸೇತುವೆ ದಾಟುತ್ತಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ರವಿವಾರ ರಾತ್ರಿಯಿಂದ ಹಿಮಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ, ಎಲ್ಲ ನದಿ- ಹಳ್ಳಗಳು ತುಂಬಿ ಹರಿಯುತ್ತಿದ್ದು, ಬಿಯಾಸ್ ನದಿ ದಂಡೆಯ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

"ಸೊಲಾಂಗ್‍ನಲ್ಲಿ ಗ್ರಾಮ ಮೇಳಕ್ಕೆ ದೊಡ್ಡ ಸಂಖ್ಯೆಯ ಜನ ಆಗಮಿಸಿದ್ದರು. ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆ ಮೂಲಕ ದಾಟುತ್ತಿದ್ದರು. ಬಹುತೇಕ ಮಂದಿ ಇತರ ಗ್ರಾಮಗಳಿಂದ ಬಂದ ಅತಿಥಿಗಳು. ಸೇತುವೆ ಕುಸಿದು ಕೆಲವು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನಾವು ನೋಡಿದ್ದೇವೆ. ನಿಖರವಾಗಿ ಎಷ್ಟು ಮಂದಿ ನೀರು ಪಾಲಾಗಿದ್ದಾರೆ ಎನ್ನುವುದು ತಿಳಿದಿಲ್ಲ. ಬಹುಶಃ ಮೂರು- ನಾಲ್ಕು ಮಂದಿ ಇದ್ದರು" ಎಂದು ಸ್ಥಳೀಯ ನಿವಾಸಿ ಅಮರ್ ಠಾಕೂರ್ ಹೇಳಿದ್ದಾರೆ.

ಗ್ರಾಮವನ್ನು ತಲುಪಲು ಸೇತುವೆ ಇಲ್ಲದ ಕಾರಣ ಜನ ಈ ತಾತ್ಕಾಲಿಕ ಕಾಲು ಸಂಕವನ್ನು ಆಶ್ರಯಿಸಬೇಕಾಗಿದ್ದು, ಯುವಕರ ನೀರು ಪಾಲಿಗೆ ಆಡಳಿತವೇ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News