ಬಿಲ್ಕಿಸ್ ಬಾನು ಪ್ರಕರಣ; ಜೀವಾವಧಿ ಶಿಕ್ಷೆಯಾಗಿದ್ದ ಎಲ್ಲ 11 ಮಂದಿ ಜೈಲಿನಿಂದ ಬಿಡುಗಡೆ

Update: 2022-08-16 02:26 GMT
ಬಿಲ್ಕಿಸ್ ಬಾನು ಮತ್ತು ಅವರ ಪತಿ

ಗೋಧ್ರಾ: ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗೋಧ್ರಾ ಘಟನೆ ಬಳಿಕ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಎಲ್ಲ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲ ಹನ್ನೊಂದು ಮಂದಿ ಆರೋಪಿಗಳು ಸೋಮವಾರ ಜೈಲಿನಿಂದ ಬಿಡುಗಡೆಯಾದರು.

ಕ್ಷಮಾದಾನ ನೀತಿಯಡಿ ಅವರನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕೈದಿಗಳನ್ನು ಬಿಡುಗಡೆ ಮಾಡಲಾಯಿತು ಎಂದು ndtv.com ವರದಿ ಮಾಡಿದೆ.

2002ರಲ್ಲಿ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು ತೀರ್ಪು ನೀಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು ಹಾಗೂ ಮುಂಬೈ ಹೈಕೋರ್ಟ್ ಇದನ್ನು ಎತ್ತಿ ಹಿಡಿದಿತ್ತು.

ಕೈದಿಗಳು 15 ವರ್ಷ ಸೆರೆಮನೆ ವಾಸ ಅನುಭವಿಸಿದ ಬಳಿಕ ಆರೋಪಿಗಳ ಪೈಕಿ ಒಬ್ಬ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಅವಧಿಪೂರ್ವ ಬಿಡುಗಡೆಗೆ ಕೋರಿದ್ದ. ಈತನ ಮನವಿಯನ್ನು ಕ್ಷಮಾದಾನ ನೀತಿಯಡಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ ಸಮಿತಿ ಬಿಡುಗಡೆಗೆ ಶಿಫಾರಸ್ಸು ಮಾಡಿತ್ತು ಎಂದು ಸಮಿತಿಯ ನೇತೃತ್ವ ವಹಿಸಿದ್ದ ಪಂಚಮಹಲ್ ಜಿಲ್ಲಾಧಿಕಾರಿ ಸುಜಲ್ ಮಾಯಾತ್ರ ಹೇಳಿದ್ದಾರೆ.

ಬಲ್ಕಿಸ್ ಬಾನು ಪ್ರಕರಣಕ್ಕೆ ಹೋಲಿಸಿದರೆ ಅದಕ್ಕಿಂತ ಸಣ್ಣ ಪುಟ್ಟ ಅಪರಾಧಗಳನ್ನು ಎಸಗಿದ ಹಲವು ಮಂದಿ ಆರೋಪಿಗಳು ಕ್ಷಮಾದಾನ ಇಲ್ಲದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಮಾನವ ಹಕ್ಕುಗಳ ವಕೀಲ ಶಂಶದ್ ಪಠಾಣ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News