ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2024ರ ಮೇ ತಿಂಗಳೊಳಗೆ ಪೂರ್ಣ: ಸಚಿವ ರಿಯಾಝ್

Update: 2022-08-16 10:16 GMT

ಕಾಸರಗೋಡು, ಆ.16: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2024ರ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇರಳ ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್  ರಿಯಾಝ್  ತಿಳಿಸಿದ್ದಾರೆ.

ಅವರು ಮಂಗಳವಾರ ತಲಪಾಡಿ - ಚೆಂಗಳ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಕುಂಬಳೆ ಯ ಮೇಲ್ಸೇತುವೆ 2022ರ ಡಿಸಂಬರ್ ನಲ್ಲಿ ಹಾಗೂ ಕಾಸರಗೋಡು ಮೇಲ್ಸೇತುವೆಯನ್ನು 2024ರ ಮೇ 15ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.  
ಕಾರಗೋಡಿನ ಜನತೆಯ ದಶಕಗಳ ಕನಸಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ  ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು. ರಾಜ್ಯದ 9 ಜಿಲ್ಲೆಗಳಲ್ಲಿ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲ ಜಿಲ್ಲೆಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ  ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದು ಸಚಿವರು ಹೇಳಿದರು.
ಕೆಲ ಸ್ಥಳಗಳಲ್ಲಿ ಲೋಪಗಳ ಬಗ್ಗೆ ಪರಿಸರವಾಸಿಗಳು ಹಾಗೂ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದು, ಈ ಬಗ್ಗೆ ಗಮನ ನೀಡಲಾಗುವುದು. ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸುವ ಗುರಿಯೊಂದಿಗೆ ಸಂಸದರು, ಶಾಸಕರು, ರಾಜಕೀಯ ಪಕ್ಷಗಳ ಸಹಕಾರ ಪಡೆದು ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್ .ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗೀಯ ಅಧಿಕಾರಿ ಬಿ.ಎಲ್.ಮೀನಾ, ಯೋಜನಾ ನಿರ್ದೇಶಕ ಸುನೀಲ್ ಕುಮಾರ್, ಎಂ.ವಿ.ಬಾಲಕೃಷ್ಣನ್ ಮೊದಲಾದವರು ಸಚಿವರ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News