ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಶ್ರೀಕಾಂತ್‌ ತ್ಯಾಗಿ ಸಹಚರರಿಗೆ ಜಾಮೀನು

Update: 2022-08-16 11:42 GMT
Photo: India Today

ಹೊಸದಿಲ್ಲಿ: ನೋಯ್ಡಾ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಆವರಣದಲ್ಲಿ ಮಹಿಳೆಯನ್ನು ನಿಂದಿಸಿ ಮತ್ತು ಹಲ್ಲೆ ಮಾಡಿದ ಆರೋಪದಲ್ಲಿ ಬಂಧಿತರಾದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿಯ ಆರು ಮಂದಿ ಬೆಂಬಲಿಗರಿಗೆ ಸೂರಜ್‌ಪುರ ನ್ಯಾಯಾಲಯವು ಜಾಮೀನು ನೀಡಿದೆ.

ಇದನ್ನೂ ಓದಿ | ಬಿಜೆಪಿ ನಮ್ಮನ್ನು ಕೈಬಿಟ್ಟಿದೆ: ಮಹಿಳೆ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತ ಶ್ರೀಕಾಂತ್ ತ್ಯಾಗಿ ಪತ್ನಿ ಆರೋಪ

ತ್ಯಾಗಿ ಬೆಂಬಲಿಗರಾದ ಪ್ರಿನ್ಸ್ ತ್ಯಾಗಿ, ನಿತಿನ್ ತ್ಯಾಗಿ, ರವಿ ಪಂಡಿತ್, ಲೋಕೇಂದ್ರ ತ್ಯಾಗಿ, ಚರ್ಚಿಲ್ ಮತ್ತು ರಾಹುಲ್ ಅನುಮತಿ ಇಲ್ಲದೆ ಸೊಸೈಟಿಯನ್ನು ಪ್ರವೇಶಿಸಿ, ಶ್ರೀಕಾಂತ್ ತ್ಯಾಗಿಯಿಂದ ಹಲ್ಲೆಗೊಳಗಾದ ಮಹಿಳೆಯ ವಿಳಾಸವನ್ನು ಕೇಳಿದ್ದರು. ಅಲ್ಲಿನ ನಿವಾಸಿಗಳು ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಬಳಿಕ ಬಂದ ಪೊಲೀಸರು ಅತಿಕ್ರಮವಾಗಿ ಪ್ರವೇಶಿಸಿದ ಆರು ಮಂದಿಯನ್ನು ಬಂಧಿಸಿದ್ದರು.

ಇವರೆಲ್ಲರ ವಿರುದ್ಧ ಐಪಿಸಿ 147, 447, 504, 506, 323, 419, 34, 120 ಬಿ ಮತ್ತು 353 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ | ಮಹಿಳೆ ಮೇಲೆ ಹಲ್ಲೆ: ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿಗೆ ಜಾಮೀನು ನಿರಾಕರಣೆ

ಶ್ರೀಕಾಂತ್‌ ತ್ಯಾಗಿ ಕೆಲವು ಗಿಡಗಳನ್ನು ಅಕ್ರಮವಾಗಿ ನೆಡುವುದನ್ನು ಮಹಿಳೆ ವಿರೋಧಿಸಿದಾಗ, ತ್ಯಾಗಿ ಮಹಿಳೆಯನ್ನು ಅವ್ಯಾಚ್ಯವಾಗಿ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು.

12 ಪೊಲೀಸ್ ತಂಡಗಳು ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಮೂರು ರಾಜ್ಯಗಳಲ್ಲಿ ಶ್ರೀಕಾಂತ್ ತ್ಯಾಗಿಗಾಗಿ ಹುಡುಕಾಟ ನಡೆಸಿ ಆತನನ್ನು ಮೀರತ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News