×
Ad

ಚೀನಾದ ವಿರುದ್ಧ ಕ್ರಮಕ್ಕೆ ಅಮೆರಿಕ ಸೇನಾ ಕಮಾಂಡರ್ ಆಗ್ರಹ

Update: 2022-08-16 21:07 IST

ಸಿಂಗಾಪುರ, ಆ.16: ತೈವಾನ್ ಮೇಲಿಂದ ಕ್ಷಿಪಣಿ ಹಾರಿಸುವ ಚೀನಾದ ಇತ್ತೀಚಿನ ನಿರ್ಧಾರವು ‘ಕೋಣೆಯಲ್ಲಿರುವ ಗೊರಿಲ್ಲಾ’(ಮುಂಬರುವ ಕಷ್ಟ ಅಥವಾ ಸಮಸ್ಯೆಯ ಸ್ಪಷ್ಟ ನೋಟ) ರೀತಿಯಲ್ಲಿದ್ದು ಅದನ್ನು ವಿರೋಧಿಸಲೇ ಬೇಕು ಎಂದು ಅಮೆರಿಕದ ಉನ್ನತ ಸೇನಾ ಕಮಾಂಡರ್ ಮಂಗಳವಾರ ಹೇಳಿದ್ದಾರೆ.

ಈ ರೀತಿಯ ವಿಷಯಗಳನ್ನು ನಾವು ವಿರೋಧಿಸುತ್ತಿರುವುದು ಅತ್ಯಂತ ಪ್ರಮುಖವಾಗಿದೆ. ಕೋಣೆಯಲ್ಲಿರುವ ಗೊರಿಲ್ಲಾ ತೈವಾನ್ ಮೇಲೆ ಕ್ಷಿಪಣಿ ಹಾರಿಸಿರುವುದು ನಮಗೆ ತಿಳಿದಿದೆ’ ಎಂದು ಅಮೆರಿಕದ ಸೆವೆಂತ್ ಫ್ಲೀಟ್(7ನೇ ನೌಕಾದಳ)ದ ವೈಸ್ ಅಡ್ಮಿರಲ್ ಕಾರ್ಲ್ ಥಾಮಸ್ ಸಿಂಗಾಪುರದಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ನಾವದನ್ನು ವಿರೋಧಿಸದಿದ್ದರೆ ಮತ್ತು ಮುಂದುವರಿಯಲು ಬಿಟ್ಟರೆ ಅದು ಸಹಜ ಪ್ರಕ್ರಿಯೆಯಾಗಿ ಬಿಡುತ್ತದೆ. ತೈವಾನ್ ಮೇಲಿಂದ ಕ್ಷಿಪಣಿಗಳನ್ನು ಅಂತರಾಷ್ಟ್ರೀಯ ಸಮುದ್ರ ಪ್ರದೇಶಕ್ಕೆ ಹಾರಿಸಿರುವುದು ಅತ್ಯಂತ ಬೇಜವಾಬ್ದಾರಿಯ ಕೃತ್ಯವಾಗಿದೆ. ಯಾಕೆಂದರೆ ಈ ಪ್ರದೇಶದಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶವಿದೆ ಮತ್ತು ದಿನಾ ಹಲವು ಹಡಗು ಸಂಚರಿಸುವ ಪ್ರದೇಶವಾಗಿದೆ ಎಂದವರು ಹೇಳಿದ್ದಾರೆ.

7ನೇ ನೌಕಾಪಡೆಯು ಜಪಾನ್ನಲ್ಲಿ ಸೇನಾನೆಲೆ ಹೊಂದಿದ್ದು ಪೆಸಿಫಿಕ್ ವಲಯದಲ್ಲಿ ಅಮೆರಿಕ ನೌಕಾಪಡೆಯ ಉಪಸ್ಥಿತಿಯ ಭಾಗವಾಗಿದೆ. ಈ ತಿಂಗಳಾರಂಭದಲ್ಲಿ ತೈವಾನ್ ಸುತ್ತಮುತ್ತ ಚೀನಾ ನಡೆಸಿದ ಸೇನಾ ಸಮರಾಭ್ಯಾಸದಲ್ಲಿ ಕೆಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ತೈವಾನ್ ರಾಜಧಾನಿ ತೈಪೆ ಮೇಲಿಂದ ಹಾರಿಹೋಗಿವೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ತೈವಾನ್ಗೆ ಎದುರಾದ ಬೆದರಿಕೆಯನ್ನು ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿಗೆ ಹೋಲಿಸಿದ ಥಾಮಸ್, ನೀವು ಅದನ್ನು ವಿರೋಧಿಸದಿದ್ದರೆ ಕ್ರಮೇಣ ಇದು ದಕ್ಷಿಣ ಚೀನಾ ಸಮುದ್ರದ ಸ್ಥಿತಿಗೆ ತಿರುಗುತ್ತದೆ. ಈಗ ಅಲ್ಲಿ ಚೀನಾದ ಮಿಲಿಟರಿ ನೆಲೆ ಸ್ಥಾಪನೆಗೊಂಡಿದೆ. ಅಲ್ಲಿ ಕ್ಷಿಪಣಿಗಳು, ನೌಕೆಗಳು , ಬೃಹತ್ ರನ್ವೇ, ರೇಡಾರ್ಗಳು, ಸಂದೇಶವಾಹಕ ವ್ಯವಸ್ಥೆ ಎಲ್ಲವನ್ನೂ ಚೀನಾ ಸ್ಥಾಪಿಸಿದೆ ಎಂದರು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ತೈವಾನ್ ತನ್ನ ಭೂವ್ಯಾಪ್ತಿಗೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಗತ್ಯಬಿದ್ದರೆ ಬಲಪ್ರಯೋಗ ನಡೆಸಿಯಾದರೂ ಅದನ್ನು ವಶಕ್ಕೆ ಪಡೆಯುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News