×
Ad

ಪಾಕಿಸ್ತಾನ: ಬಸ್-ಟ್ಯಾಂಕರ್ ಡಿಕ್ಕಿ; ಕನಿಷ್ಟ 20 ಮಂದಿ ಸಜೀವ ದಹನ

Update: 2022-08-16 21:09 IST

ಇಸ್ಲಮಾಬಾದ್, ಆ.16: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಪ್ರಯಾಣಿಕರ ಬಸ್ಸು ಮತ್ತು ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡ ಕಾರಣ ಕನಿಷ್ಟ 20 ಮಂದಿ ಸಜೀವ ದಹನವಾಗಿರುವುದಾಗಿ ವರದಿಯಾಗಿದೆ. ಲಾಹೋರ್ನಿಂದ ಸುಮಾರು 350 ಕಿಮೀ ದೂರದ ಮುಲ್ತಾನ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಮಿತಿಮೀರಿದ ವೇಗ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಲಾಹೋರ್ನಿಂದ ಕರಾಚಿಗೆ ತೆರಳುತ್ತಿದ್ದ ಬಸ್ಸು ಮತ್ತು ತೈಲ ಟ್ಯಾಂಕರ್ ಮಧ್ಯೆ ಡಿಕ್ಕಿಯಾಗಿದ್ದು ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನಲ್ಲಿದ್ದ ಕನಿಷ್ಟ 20 ಮಂದಿ ಸಜೀವ ದಹನಗೊಂಡಿದ್ದು ತೀವ್ರ ಸುಟ್ಟಗಾಯವಾಗಿರುವ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಗುರುತಿಸುವುದು ಕಷ್ಟವಾಗಿದೆ. ಡಿಎನ್ಎ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಘಾತದ ಬಗ್ಗೆ ತೀವ್ರ ಕಳವಳ ಮತ್ತು ಸಂತಾಪ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಪರ್ವೇಝ್ ಇಲಾಹಿ, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News