‘ಉಗ್ರರ ದಾಳಿ ತಡೆಯಲು ಸರಕಾರ ವಿಫಲ’: ಕಣಿವೆ ತೊರೆಯಲು ಕಾಶ್ಮೀರಿ ಪಂಡಿತರಿಗೆ ಕೆಪಿಎಸ್ಎಸ್ ಆಗ್ರಹ

Update: 2022-08-16 15:56 GMT

ಶ್ರೀನಗರ,ಆ.16: ಉಗ್ರಗಾಮಿಗಳಿಂದ ಹೆಚ್ಚುತ್ತಿರುವ ಸರಣಿ ದಾಳಿಗಳನ್ನು ತಡೆಗಟ್ಟಲು ಸರಕಾರವು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ತನ್ನ ಸಮುದಾಯದ ಸದಸ್ಯರಿಗೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್ಎಸ್) ಮಂಗಳವಾರ ಕರೆ ನೀಡಿದೆ.

   ‌
‘‘ಇನ್ನೊಂದು ಮಾರಣಾಂತಿಕ ದಾಳಿಯೊಂದಿಗೆ ಕಾಶ್ಮೀರ ಕಣಿವೆಯಲ್ಲಿರುವ ಎಲ್ಲಾ ಕಾಶ್ಮೀರಿ ಪಂಡಿತರನ್ನು ಹತ್ಯೆಗೈಯವುದಾಗಿ ಭಯೋತ್ಪಾದಕರು ಸ್ಪಷ್ಟಪಡಿಸಿದ್ದಾರೆ’’ ಎಂದು ಕೆಪಿಎಸ್ಎಸ್ ವರಿಷ್ಠ ಸಂಜಯ್ ಟಿಕೂ ತಿಳಿಸಿದ್ದಾರೆ. ಕಣಿವೆಯನ್ನು ತೊರೆದು ಜಮ್ಮು, ದಿಲ್ಲಿಯಂತಹ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಟಿಕೂ ಅವರು ಎಲ್ಲಾ ಕಾಶ್ಮೀರಿ ಪಂಡಿತರನ್ನು ಆಗ್ರಹಿಸಿದ್ದಾರೆ.
 
‘‘ಕಳೆದ 32 ವರ್ಷಗಳಿಂದ ನಾವು ಇದೇ ಪರಿಸ್ಥಿತಿಯನ್ನು ನೋಡುತ್ತಲೇ ಇದ್ದೇವೆ. ಸರಕಾರವು ಅಲ್ಪಸಂಖ್ಯಾತರಿಗೆ ಅದರಲ್ಲೂ ವಿಶೇಷವಾಗಿ ಕಾಶ್ಮೀರಿ ಪಂಡಿತರಿಗೆ ಭದ್ರತೆಯನ್ನು ಒದಗಿಸಲು ವಿಫಲವಾಗಿದೆ. ಎಷ್ಟು ಕಾಲ ನಾವು ಹೀಗೆಯೇ ಸಾಯುತ್ತಲೇ ಇರುವುದು ?, ಇದು ಸಾಕಾಗಿ ಹೋಗಿದೆ’’ ಎಂದು ಟಿಕೂ ಅವರು ಪಿಟಿಐ ಸುದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರು ತಮ್ಮ ತಮ್ಮ ಹಳ್ಳಿಗಳಲ್ಲಿ ವಾಸವಾಗಿರುವಂತೆ ಅಧಿಕಾರಿಗಳು ಸೂಚಿಸುತ್ತಾರೆ. ಆದರೆ ಸಂಭಾವ್ಯ ದಾಳಿಯ ಬಗ್ಗೆ ಅವರಿಗೆ ಮಾಹಿತಿ ದೊರೆಯುತ್ತಿದ್ದರೂ, ನಮ್ಮನ್ನು ರಕ್ಷಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ’’ ಎಂದರು.

ಕಾಶ್ಮೀರಿ ಪಂಡಿತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಉಗ್ರರ ಉದ್ದೇಶದ ಬಗ್ಗೆಯೂ ಅವರು ಅಚ್ಚರಿ ವ್ಯಕ್ತಪಡಿಸಿದರು. ಇಲ್ಲಿಗೆ ಬರುವ ಪ್ರವಾಸಿಗರು ಸುರಕ್ಷಿತವಾಗಿರುತ್ತಾರಾದರೂ, ಕಾಶ್ಮೀರಿ ಪಂಡಿತರನ್ನು ಮಾತ್ರವೇ ಯಾಕೆ ಗುರಿಯಾಗಿರಿಸಲಾಗುತ್ತಿದೆ?’’ ಎಂದವರು ಪ್ರಶ್ನಿಸಿದರು. ಕಾಶ್ಮೀರಿ ಪಂಡಿತರು ಕಣಿವೆಯಿಂದ ಸಾಮೂಹಿಕವಾಗಿ ವಲಸೆ ಹೋಗಬೇಕೆಂಬ ತನ್ನ ಕರೆಯಿಂದ ಉಂಟಾಗುವ ಪರಿಣಾಮವನ್ನು ಎದುರಿಸಲು ಸಿದ್ಧವೆಂದು ಟಿಕೂ ಹೇಳಿದರು.
 
ಸರಕಾರವು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ)ಯಡಿ ತನ್ನ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯಿದೆಯೆಂದು ಅವರು ಹೇಳಿದರು. ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ಪಡೆಗಳ ಯೋಜಿತ ದಾಳಿಯಲ್ಲಿ ಈ ವರ್ಷ ಒಟ್ಟು 15 ಮಂದಿ ನಾಗರಿಕರು ಹಾಗೂ ಆರು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News