ನಮ್ಮ ಮಗಳನ್ನು ಪ್ರತಿದಿನ ನೆನಪಿಸುತ್ತೇವೆ: ಪ್ರಕರಣದ ಆರೋಪಿಗಳ ಬಿಡುಗಡೆ ಬಳಿಕ ಬಿಲ್ಕೀಸ್‌ ಬಾನು ಪತಿ ಪ್ರತಿಕ್ರಿಯೆ

Update: 2022-08-16 17:04 GMT
Photo: NDTV

ಹೊಸದಿಲ್ಲಿ: 2002ರ ಗುಜರಾತ್ ಗಲಭೆಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ , ಕುಟುಂಬದ ಏಳು ಮಂದಿಯನ್ನು ಕೊಂದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದವರನ್ನು ಗುಜರಾತ್ ಸರ್ಕಾರ “ಹೇಗೆ ಮತ್ತು ಏಕೆ “ ಬಿಡುಗಡೆ ಮಾಡಿದೆ   ಎಂದು ನನಗೆ ತಿಳಿದಿಲ್ಲ ಎಂದು ಬಿಲ್ಕಿಸ್ ಬಾನು ಅವರ ಪತಿ ಯಾಕೂಬ್ ರಸೂಲ್ ಇಂದು ಹೇಳಿದ್ದಾರೆ. 

"ನಮ್ಮ ಮಗಳು ಸೇರಿದಂತೆ ಘಟನೆಯಲ್ಲಿ ಕೊಲ್ಲಲ್ಪಟ್ಟವರನ್ನು ನಾವು ಪ್ರತಿದಿನ ನೆನಪಿಸಿಕೊಳ್ಳುತ್ತೇವೆ" ಎಂದು ರಸೂಲ್‌ ತಿಳಿಸಿದ್ದಾರೆ.  “ನಾವು ಈ (ಬಿಡುಗಡೆ) ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಹತ್ತಿರದ ಮತ್ತು ಆತ್ಮೀಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಷ್ಟೇ ನಾವು ಬಯಸುವುದು.” ಎಂದು ಅವರು ಹೇಳಿದ್ದಾರೆ. 

ಬಿಲ್ಕಿಸ್ ಬಾನುಗೆ ₹ 50 ಲಕ್ಷ ಪರಿಹಾರ, ಮನೆ ಮತ್ತು ಉದ್ಯೋಗ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಮೂರು ವರ್ಷಗಳ ನಂತರ ಪ್ರಕರಣದಲ್ಲಿ ಅಪರಾಧ ಸಾಬೀತಾದವರನ್ನು ಬಿಡುಗಡೆಗೊಳಿಸಲಾಗಿದೆ.

ಸರ್ಕಾರದಿಂದ ಹಣವನ್ನು ಪಾವತಿಸಲಾಗಿದೆ, ಅದನ್ನು ಅವರ ಐದು ಪುತ್ರರ ಶಿಕ್ಷಣಕ್ಕಾಗಿ ಬಳಸಲಾಗುತ್ತಿದೆ. ಆದರೆ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರವು ಇನ್ನೂ ಉದ್ಯೋಗ ಅಥವಾ ಮನೆಗಾಗಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ರಸೂಲ್‌ ಹೇಳಿದ್ದಾರೆ. 

"ನಮಗೆ ಇನ್ನೂ ಯಾವುದೇ ಸ್ಥಿರ ವಿಳಾಸವಿಲ್ಲ, ನಾವು ಎಲ್ಲಿ ವಾಸಿಸುತ್ತಿದ್ದೇವೆ ಎಂಬುದರ ಕುರಿತು ನಾವು ಇನ್ನೂ ಮಾತನಾಡಲು ಸಾಧ್ಯವಿಲ್ಲ, ಹಾಗೆ ಮಾಡುವುದು ನಮಗೆ ತುಂಬಾ ಕಷ್ಟ" ಎಂದು ಅವರು ಹೇಳಿದ್ದಾರೆ.

ಅಪರಾಧಿಗಳನ್ನು ಸರ್ಕಾರ ಬಿಡುಗಡೆಗೊಳಿಸಿದ ಬಳಿಕ ಸೋಮವಾರ ಗೋಧ್ರಾ ಜೈಲಿನಿಂದ ಹೊರಬಂದ  ಅಪರಾಧಿಗಳನ್ನು ಸಿಹಿ ಮತ್ತು ಹೂಮಾಲೆಗಳೊಂದಿಗೆ ಸ್ವಾಗತಿಸಲಾಗಿದೆ.

ಇದನ್ನೂ ಓದಿ| ಬಿಲ್ಕಿಸ್‌ ಬಾನು ಪ್ರಕರಣದ ತಪ್ಪಿತಸ್ಥರ ಬಿಡುಗಡೆ: ʼಬಿಜೆಪಿಯ ಸಮಾಧಾನಕರ ರಾಜಕಾರಣʼ ಎಂದ ಉವೈಸಿ

"ಅವರು ಬಿಡುಗಡೆಯಾಗಿದ್ದಾರೆಂದು ತಿಳಿದು ನಮಗೆ ಆಶ್ಚರ್ಯವಾಯಿತು. ಅಪರಾಧಿಗಳು ತಮ್ಮ ಅರ್ಜಿಯನ್ನು ಯಾವಾಗ ಪ್ರಕ್ರಿಯೆಗೊಳಿಸಿದರು ಮತ್ತು ರಾಜ್ಯ ಸರ್ಕಾರವು ಯಾವ ತೀರ್ಪನ್ನು ಪರಿಗಣನೆಗೆ ತೆಗೆದುಕೊಂಡಿತು ಎಂಬುದು ನಮಗೆ ತಿಳಿದಿಲ್ಲ. ನಮಗೆ ಯಾವುದೇ ರೀತಿಯ ಸೂಚನೆ ಬಂದಿಲ್ಲ.” ಎಂದು ರಸೂಲ್‌ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News