ನ್ಯಾಯಾಲಯದ ಹೊರಗೆಯೇ ವಿಚಾರಣಾಧೀನ ಕೈದಿಯನ್ನು ಗುಂಡಿಕ್ಕಿ ಹತ್ಯೆ

Update: 2022-08-17 02:02 GMT

ಲಕ್ನೋ: ಉತ್ತರ ಪ್ರದೇಶದ ಹಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೊರಗೆ 33 ವರ್ಷ ವಯಸ್ಸಿನ ವಿಚಾರಣಾಧೀನ ಕೈದಿಯೊಬ್ಬನನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಕೊತ್ವಾಲಿನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ನ್ಯಾಯಾಲಯ ಹೊರಠಾಣೆಯ ಉಸ್ತುವಾರಿ ಹೊಂದಿದ್ದ ಪೊಲೀಸನನ್ನು ಘಟನೆಗೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ ಎಂದು ಹಾಪುರ ಪೊಲೀಸ್ ವಕ್ತಾರರು ಹೇಳಿದ್ದಾರೆ.

ಮೃತ ಕೈದಿ ಹರ್ಯಾಣದ ಫರೀದಾಬಾದ್ ಜಿಲ್ಲೆಯ ಅನಂಗಪುರ ಗ್ರಾಮದ ಲಖನ್ ಅಲಿಯಾಸ್ ಯಶ್ಫಾಲ್ ಎಂದು ಗುರುತಿಸಲಾಗಿದೆ.

2019ರಲ್ಲಿ ದೌಲಾನಾ ಪ್ರದೇಶದಲ್ಲಿ ನಡೆದ ಹತ್ಯೆ ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದ. ಆರೋಪಿಯನ್ನು ಹರ್ಯಾಣದಿಂದ ನ್ಯಾಯಾಲಯಕ್ಕೆ ಕರೆ ತರುತ್ತಿದ್ದ ವೇಳೆ ನ್ಯಾಯಾಲಯ ಆವರಣದ ಹೊರಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಾಪುರ ಹೆಚ್ಚುವರಿ ಎಸ್ಪಿ ಮುಖೇಶ್‍ ಚಂದ್ರ ಮಿಶ್ರಾ ಹೇಳಿದ್ದಾರೆ.

ಹಂತಕರು ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಮುಖ್ಯದ್ವಾರದಿಂದ 25-30 ಮೀಟರ್ ಹೊರಗೆ ಈ ದಾಳಿ ನಡೆದಿದೆ ಎಂದು ವೃತ್ತನಿರೀಕ್ಷಕ ಎಸ್.ಎನ್.ವೈಭವ್ ಪಾಂಡೆ ತಿಳಿಸಿದ್ದಾರೆ. ನಡಿಗೆಯಲ್ಲೇ ಬಂದಿದ್ದ ಹಂತಕರು ಪಕ್ಕದ ರಘುವೀರಗಂಜ್ ಎಂಬಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಎಸ್ಪಿ ದೀಪಕ್ ಭೂಕರ್ ವಿವರಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು. ಹಂತಕರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಎಸ್ಪಿ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಹಂತಕರನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News