ಪ್ರಧಾನಿಗಳೇ, ಇಡೀ ದೇಶವೇ ನಿಮ್ಮ ಮಾತು ಹಾಗೂ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ನೋಡುತ್ತಿದೆ: ರಾಹುಲ್ ಗಾಂಧಿ

Update: 2022-08-17 07:55 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು (Bilkis Bano’s rapists)ಗುಜರಾತ್ ಸರಕಾರ  ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ  ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಪ್ರಧಾನಿ ಅವರು ಹೇಳಿದ್ದಕ್ಕೂ ಅವರು ಮಾಡಿದ್ದಕ್ಕೂ ಇರುವ ವ್ಯತ್ಯಾಸವನ್ನು ಇಡೀ ದೇಶ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು  ಟ್ವಿಟರ್‌ನಲ್ಲಿ ಬರೆದಿರುವ ರಾಹುಲ್  “5 ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಹಾಗೂ  ಆಕೆಯ 3 ವರ್ಷದ ಮಗುವನ್ನು  ಕೊಂದವರನ್ನು 'ಆಝಾದಿ ಕೆ ಅಮೃತ್ ಮಹೋತ್ಸವ' ಸಮಯದಲ್ಲಿ ಬಿಡುಗಡೆ ಮಾಡಲಾಯಿತು. ಮಹಿಳಾ ಶಕ್ತಿಯ ಬಗ್ಗೆ ಮಾತನಾಡುವವರು ದೇಶದ ಮಹಿಳೆಯರಿಗೆ ನೀಡುವ ಸಂದೇಶವೇನು? ಪ್ರಧಾನಿಗಳೇ, ಇಡೀ ದೇಶವೇ ನಿಮ್ಮ ಮಾತು ಹಾಗೂ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ನೋಡುತ್ತಿದೆ’’ಎಂದರು.

2002 ರ ಗೋಧ್ರಾ ನಂತರದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಬಾನು ಅವರ  ಕುಟುಂಬದ ಏಳು ಸದಸ್ಯರ ಕೊಲೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಆರೋಪಿಗಳು ಸೋಮವಾರ ಗೋಧ್ರಾ ಉಪ-ಜೈಲಿನಿಂದ ಹೊರ ಬಂದಿದ್ದಾರೆ. ಗುಜರಾತ್ ಸರಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಒಂಬತ್ತನೇ ಬಾರಿಗೆ ಕೆಂಪು ಕೋಟೆಯ ಐತಿಹಾಸಿಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿ ಟ್ವೀಟಿಸಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಧಾನಿ ಅವರು ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸುವಂತೆ ಕರೆ ನೀಡಿದ್ದರು ಹಾಗೂ  ಮಹಿಳೆಯರನ್ನು ಗೌರವಿಸುವಂತೆ ದೇಶದ ಜನತೆಯನ್ನು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News