ಮಹಿಳೆಯನ್ನು ನಿಂದಿಸಿ, ಹಲ್ಲೆ ಮಾಡಿದ ಶ್ರೀಕಾಂತ್ ತ್ಯಾಗಿ ಬಂಧನ: ಬಿಜೆಪಿ ವಿರುದ್ಧ ಸಿಡಿದೆದ್ದ ತ್ಯಾಗಿ ಬ್ರಾಹ್ಮಣರು
ಹೊಸದಿಲ್ಲಿ: ಆಗಸ್ಟ್ 5ರಂದು ಶ್ರೀಕಾಂತ್ ತ್ಯಾಗಿ(Shrikant Tyagi) ಎಂಬ ಬಿಜೆಪಿ ನಾಯಕ ಮಹಿಳೆಯೋರ್ವರನ್ನು ನಿಂದಿಸಿ ಹಲ್ಲೆಗೈಯುತ್ತಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. ನೋಯ್ಡಾದ ಗ್ರ್ಯಾಂಡ್ ಒಮೆಕ್ಸ್ (Grand Omex) ಸೊಸೈಟಿಯಲ್ಲಿ ಈ ಘಟನೆ ನಡೆದಿತ್ತು. ಬಳಿಕ ಘಟನೆಗೆ ಸಂಬಂಧಿಸಿದಂತೆ ತ್ಯಾಗಿಯನ್ನು ಪೊಲೀಸರು ಬಂಧಿಸಿದ್ದು ಮಾತ್ರವಲ್ಲದೇ ಆತನ ಕಟ್ಟಡಕ್ಕೆ ಬುಲ್ಡೋಜರ್ ಪ್ರಯೋಗ ಮಾಡಲಾಗಿತ್ತು. ಆದರೆ ಶ್ರೀಕಾಂತ್ ತ್ಯಾಗಿಯ ಸಮುದಾಯ ತ್ಯಾಗಿ ಬ್ರಾಹ್ಮಣರು ಆತನ ವಿರುದ್ಧದ ಕ್ರಮಗಳು ಹಾಗು ಬಿಜೆಪಿ ಕೈಗೊಂಡಿರುವ ನಿಲುವುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ. ಶ್ರೀಕಾಂತ್ ಜಾಮೀನು ಅರ್ಜಿ ಮಂಗಳವಾರ ಗೌತಮ್ ಬುದ್ಧ ನಗರ ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಆರೋಪಿ ಶ್ರೀಕಾಂತನನ್ನು ಬಂಧಿಸಿದ ಕೂಡಲೇ ಆತನ ಸಮುದಾಯವು ಆತನನ್ನು "ರಕ್ಷಿಸಲು" ಕಣಕ್ಕಿಳಿಯಿತು. ತ್ಯಾಗಿ ಬ್ರಾಹ್ಮಣರು ಪಶ್ಚಿಮ ಯುಪಿಯ ಹಾಪುರ್, ಮುಜಾಫರ್‌ನಗರ ಮತ್ತು ಮೀರತ್‌ನಲ್ಲಿ ಸರಣಿ ಪಂಚಾಯತ್ ಗಳನ್ನು ನಡೆಸಿದರು, ಶ್ರೀಕಾಂತ್ ನನ್ನು ಕ್ರಿಮಿನಲ್ ಎಂದು ಬಿಂಬಿಸುತ್ತಿರುವುದು , ಅವರ ಫ್ಲಾಟ್‌ಗೆ ಬುಲ್‌ಡೋಜರ್‌ಗಳನ್ನು ಕಳುಹಿಸಿರುವುದು ತ್ಯಾಗಿ ಬ್ರಾಹ್ಮಣರನ್ನು ಕೆರಳಿಸಿದೆ. ಶ್ರೀಕಾಂತ್ ಅವರ ಕುಟುಂಬಕ್ಕೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
"ಅವರು ಶ್ರೀಕಾಂತ್ ತ್ಯಾಗಿಗೆ ಈ ರೀತಿ ಕಿರುಕುಳ ನೀಡುತ್ತಿದ್ದರೆ, ಪಶ್ಚಿಮ ಯುಪಿಯ ಇಡೀ ತ್ಯಾಗಿ ಸಮುದಾಯವು 1,000 ಟ್ರಾಕ್ಟರ್ ಟ್ರಾಲಿಗಳೊಂದಿಗೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯನ್ನು ಘೇರಾವ್ ಮಾಡುತ್ತದೆ" ಎಂದು ಮೀರತ್‌ನ ಪಂಚಾಯತ್‌ಗಳಲ್ಲಿ ಒಂದನ್ನು ನಡೆಸಿದ ತ್ಯಾಗಿ ಬ್ರಾಹ್ಮಣ (Tyagi Brahmins) ಹಾಸ್ಟೆಲ್‌ನ ಕಾರ್ಯಕಾರಿ ಸದಸ್ಯ ಶೇಖರ್ ತ್ಯಾಗಿ, ಬೆದರಿಕೆ ಹಾಕಿದ್ದಾರೆ. “ಕ್ಷುಲ್ಲಕ ಜಗಳಕ್ಕೆ ಅವರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ಶ್ರೀಕಾಂತ್ ಮಹಿಳೆಯನ್ನು ನಿಂದಿಸಿದ್ದು ತಪ್ಪು, ಆತನ ವರ್ತನೆಯನ್ನು ನಮ್ಮ ಸಮುದಾಯ ಒಪ್ಪುವುದಿಲ್ಲ. ಅಂತಹ ನಡವಳಿಕೆಗೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು, ಆದರೆ ಅವರ ಕುಟುಂಬವನ್ನು ಹಿಂಸಿಸುವುದು ತಪ್ಪು." ಎಂದು ಅವರು ಹೇಳಿದ್ದಾರೆ.
ಶ್ರೀಕಾಂತ್‌ಗೆ ಆತನ ಸಮುದಾಯದಿಂದ ಬೆಂಬಲದ ಮಹಾಪೂರವೇ ಹರಿದಿರುವುದು ಬಿಜೆಪಿಯನ್ನು ಆತಂಕಕ್ಕೀಡು ಮಾಡಿದೆ. ತ್ಯಾಗಿ ಬ್ರಾಹ್ಮಣರು ಸಾಂಪ್ರದಾಯಿಕವಾಗಿ ಬಿಜೆಪಿಗೆ ಮತದಾರರು. ಅವರು ಪಶ್ಚಿಮ ಯುಪಿಯಲ್ಲಿ ಗಣನೀಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಹೊಂದಿರುವುದರಿಂದ, ಪಕ್ಷಕ್ಕೆ ಅವರನ್ನು ಅಸಮಾಧಾನಗೊಳಿಸಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ತ್ಯಾಗಿ ಸಮುದಾಯದವರಿರುವ ಗ್ರಾಮಗಳಲ್ಲಿ ಬಿಜೆಪಿ ಪಕ್ಷಕ್ಕೆ ಬಹಿಷ್ಕಾರ ಹಾಕುವಂತೆ ಭಿತ್ತಿಪತ್ರಗಳು ಕಾಣಿಸಿಕೊಂಡಿರುವುದು ಬಿಜೆಪಿಗೆ ಆತಂಕ ತಂದಿದೆ.
ಮುಝಫರ್‌ನಗರದ (Muzaffarnagar) ಒಂದು ಪೋಸ್ಟರ್ ನಲ್ಲಿ, “ಇದು ತ್ಯಾಗಿ ಗ್ರಾಮವಾದ ಸೋಹಂಜನಿ ಐತಿಹಾಸಿಕ ಗ್ರಾಮವಾಗಿದೆ. ಬಿಜೆಪಿ ನಾಯಕರಿಗೆ ಇಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ. ಬಿಜೆಪಿಗೆ ಬಹಿಷ್ಕಾರ. ಕಮಲಕ್ಕೆ ಮತ ಹಾಕಿದ್ದು ತಪ್ಪು." ಎಂದು ಬರೆಯಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮತ್ತೊಂದು ಪೋಸ್ಟರ್ ನಲ್ಲಿ ತ್ಯಾಗಿ ಬ್ರಾಹ್ಮಣರನ್ನು ಆಗಸ್ಟ್ 13 ರಂದು ಮೀರತ್‌ನಿಂದ ನೋಯ್ಡಾಕ್ಕೆ "ಶ್ರೀಕಾಂತ್ ತ್ಯಾಗಿಯ ಗೌರವಾರ್ಥ" ಮೆರವಣಿಗೆ ನಡೆಸುವಂತೆ ಆಹ್ವಾನ ನೀಡಲಾಗಿತ್ತು.
ತ್ಯಾಗಿ ಬ್ರಾಹ್ಮಣ ಹಾಸ್ಟೆಲ್‌ನ(Tyagi Brahmin Hostel) ಶೇಖರ್ ಮಾತನಾಡಿ, ಶ್ರೀಕಾಂತ್ ವಿರುದ್ಧ ಪೊಲೀಸರ ಕ್ರಮವನ್ನು ಸಮುದಾಯವು ವಿರೋಧಿಸುವುದಿಲ್ಲ ಆದರೆ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ. "ಹಾಗೆಯೇ, ಆ ಮಹಿಳೆ ಶ್ರೀಕಾಂತ್‌ನನ್ನು ಪ್ರಚೋದಿಸುತ್ತಿದ್ದಳು, ಅವನನ್ನು ಮುಟ್ಟಲು ಹೋಗುತ್ತಿದ್ದಳು. ಶ್ರೀಕಾಂತ್‌ಗೆ ಪ್ರಚೋದನೆ ನೀಡಿದ ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹ ಕ್ರಮ ಕೈಗೊಳ್ಳದಿದ್ದರೆ, ತ್ಯಾಗಿ ಸಮುದಾಯವು ಓಮ್ಯಾಕ್ಸ್ ಸಮಾಜಕ್ಕೆ ಘೇರಾವ್ ಹಾಕುತ್ತದೆ" ಎಂದು ಹೇಳಿದರು.
ತ್ಯಾಗಿ ಬ್ರಾಹ್ಮಣ ಹಾಸ್ಟೆಲ್ ಪಂಚಾಯತ್‌ನಲ್ಲಿ ಭಾಗವಹಿಸಿದ್ದ ಮೀರತ್‌ನ ಸ್ಥಳೀಯ ಬಿಜೆಪಿ ಪದಾಧಿಕಾರಿ ಶುಭಂ ತ್ಯಾಗಿ, ಶ್ರೀಕಾಂತ್ ವಿರುದ್ಧದ ಗೂಂಡಾ ಕಾಯ್ದೆಯ ಆರೋಪಗಳನ್ನು ಕೈಬಿಡದಿದ್ದರೆ ಸುಮಾರು 200 ಹಳ್ಳಿಗಳ ತ್ಯಾಗಿಗಳು ತಮ್ಮ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯನ್ನು ಸುತ್ತುವರೆಯಲಿದ್ದಾರೆ ಎಂದು ಹೇಳಿದರು. “ಪಶ್ಚಿಮ ಯುಪಿಯಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ. ನಾವು ಶೀಘ್ರದಲ್ಲೇ ದೊಡ್ಡ ಸಭೆ ನಡೆಸಿ ಓಮ್ಯಾಕ್ಸ್ ಘೇರಾವ್ ಬಗ್ಗೆ ನಿರ್ಧರಿಸುತ್ತೇವೆ. ಶ್ರೀಕಾಂತ್ ಜೀ ಅವರಿಗೆ ಅನ್ಯಾಯ ಮಾಡಲಾಗಿದೆ. ನಮ್ಮ ಸಮುದಾಯವು ಸಂಪೂರ್ಣವಾಗಿ ಶ್ರೀಕಾಂತ್ ಜಿ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಇದೆ” ಎಂದು ಶುಭಂ ಹೇಳಿದ್ದಾರೆ.