ಇಸ್ರೇಲ್‌-ಟರ್ಕಿ ರಾಜತಾಂತ್ರಿಕ ಸಂಬಂಧಗಳ ಪುನಸ್ಥಾಪನೆ: ಇಸ್ರೇಲ್‌ ಪ್ರಧಾನಿ ಘೋಷಣೆ

Update: 2022-08-17 14:39 GMT
Photo: Twitter/yairlapid

ಜೆರುಸಲೇಂ:‌ ಇಸ್ರೇಲ್‌ನ ಪ್ರಧಾನಿ ಯೈರ್ ಲ್ಯಾಪಿಡ್ ಟರ್ಕಿಯೊಂದಿಗಿನ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಹದಗೆಟ್ಟ ಹಲವು ವರ್ಷಗಳ ನಂತರ ಈ ಪ್ರಕಟಣೆಯು ಹೊರಬಂದಿದೆ.

"ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಅವರೊಂದಿಗಿನ ನನ್ನ ಸಂಭಾಷಣೆಯ ನಂತರ, ಇಸ್ರೇಲ್ ಮತ್ತು ಟರ್ಕಿಯು ರಾಯಭಾರಿಗಳು ಮತ್ತು ಕಾನ್ಸುಲ್ ಜನರಲ್ ಗಳನ್ನು ಮರಳಿ ಕಳುಹಿಸುತ್ತಿದ್ದಾರೆ.  ಟರ್ಕಿಯೊಂದಿಗಿನ ಸಂಬಂಧಗಳ ನವೀಕರಣವು ಪ್ರಾದೇಶಿಕ ಸ್ಥಿರತೆಗೆ ಪ್ರಮುಖ ಆಸ್ತಿಯಾಗಿದೆ, ಇದು ಇಸ್ರೇಲ್ ನಾಗರಿಕರಿಗೆ ಆರ್ಥಿಕವಾಗಿ ಬಹಳ ಮುಖ್ಯವಾಗಿದೆ. ನಾವು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ ಮತ್ತು ವಿಶ್ವದಲ್ಲಿ ಇಸ್ರೇಲ್‌ನ ಅಂತರಾಷ್ಟ್ರೀಯ ಸ್ಥಾನಮಾನವನ್ನು ಬಲಪಡಿಸುತ್ತೇವೆ” ಎಂದು ಪಿಎಂ ಯೈರ್ ಲ್ಯಾಪಿಡ್ ಬುಧವಾರ ಹೇಳಿದ್ದಾರೆ.

ಇಸ್ರೇಲಿ ಪ್ರಧಾನಿ ಪೂರ್ಣ ರಾಜತಾಂತ್ರಿಕ ಪ್ರಾತಿನಿಧ್ಯಕ್ಕೆ ಮರಳುವ ಎರಡು ರಾಷ್ಟ್ರಗಳ ನಿರ್ಧಾರವನ್ನು ಸರಣಿ ಟ್ವೀಟ್‌ ಮೂಲಕ ಘೋಷಿಸಿದ್ದಾರೆ.

"ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್ ಸಾವುಲು ಅವರೊಂದಿಗೆ ನಾನು ಅಂಕಾರಾ ಭೇಟಿಯ ಸಮಯದಲ್ಲಿ ತಲುಪಿದ ತೀರ್ಮಾನಗಳನ್ನು ಅನುಸರಿಸಿ ಮತ್ತು ಟರ್ಕಿಯ ಅಧ್ಯಕ್ಷ ಎರ್ದೊಗನ್ ಅವರೊಂದಿಗಿನ ನನ್ನ ಸಂಭಾಷಣೆಯನ್ನು ಅನುಸರಿಸಿ, ಕಳೆದ ವರ್ಷದಲ್ಲಿ ಇಸ್ರೇಲ್-ಟರ್ಕಿ ಸಂಬಂಧಗಳಲ್ಲಿನ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಉಭಯ ದೇಶಗಳು ರಾಜತಾಂತ್ರಿಕ ಪ್ರಾತಿನಿಧ್ಯಕ್ಕೆ ಪೂರ್ಣವಾಗಿ ಮರಳಲು ನಿರ್ಧರಿಸಿದವು ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ರಾತ್ರಿ, ಇಸ್ರೇಲ್  ಡೈರೆಕ್ಟರ್ ಜನರಲ್ ಅಲೋನ್ ಉಶ್ಪಿಜ್ ಅವರು ಟರ್ಕಿಯ ಉಪ ರಾಯಭಾರಿ ಸಾದತ್ ಓನಲ್ ಅವರೊಂದಿಗೆ ಮಾತನಾಡಿದ್ದಾರೆ. ಇಬ್ಬರೂ ವಿಷಯವನ್ನು ಮುಕ್ತಾಯಗೊಳಿಸಿದ್ದಾರೆ. ಇಸ್ರೇಲ್ ಮತ್ತು ಟರ್ಕಿ ನಡುವಿನ ಸಂಬಂಧಗಳ ಮಟ್ಟವನ್ನು ಪೂರ್ಣ ರಾಜತಾಂತ್ರಿಕ ಪ್ರಾತಿನಿಧ್ಯಕ್ಕೆ ಪುನಃ ಹೆಚ್ಚಿಸಲು ಮತ್ತು ಎರಡೂ ದೇಶಗಳ ರಾಯಭಾರಿಗಳು ಮತ್ತು ಕಾನ್ಸುಲ್ ಜನರಲ್ ಅನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ.

“ರಾಜತಾಂತ್ರಿಕ ಸಂಬಂಧಗಳ ಪುನಃಸ್ಥಾಪನೆಯು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅಂಕಾರಾಕ್ಕೆ (ಟರ್ಕಿ ರಾಜಧಾನಿ) ಭೇಟಿ ನೀಡಿದ ನಂತರ ಮತ್ತು ಇಸ್ರೇಲ್ ಹಾಗೂ ಟರ್ಕಿ ವಿದೇಶಾಂಗ ಮಂತ್ರಿಗಳ ಪರಸ್ಪರ ಭೇಟಿಯ ಬಳಿಕ ಸಂಬಂಧಗಳ ಅಭಿವೃದ್ಧಿಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮುಂದುವರಿಕೆಯಾಗಿದೆ. ಸಂಬಂಧಗಳನ್ನು ನವೀಕರಿಸುವುದು ರಾಷ್ಟ್ರಗಳ ನಡುವಿನ ಸಂಬಂಧವನ್ನು ಗಾಢವಾಗಿಸಲು, ಆರ್ಥಿಕ, ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಬಲಪಡಿಸಲು ಕೊಡುಗೆ ನೀಡುತ್ತದೆ, ”ಎಂದು ಇಸ್ರೇಲ್‌ನ ಪಿಎಂ ಯೈರ್ ಲ್ಯಾಪಿಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News