ಹತ್ಯಾಕಾಂಡದ ಬಗ್ಗೆ ಪೆಲೆಸ್ತೀನ್ ಅಧ್ಯಕ್ಷರ ಹೇಳಿಕೆಗೆ ಜರ್ಮನಿ ಛಾನ್ಸಲರ್ ಖಂಡನೆ

Update: 2022-08-17 15:42 GMT

ಬರ್ಲಿನ್, ಆ.17: ಹತ್ಯಾಕಾಂಡದ ಬಗ್ಗೆ ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಬರ್ಲಿನ್ನಲ್ಲಿ ನೀಡಿದ ಹೇಳಿಕೆ ಅಸಹ್ಯವಾಗಿದೆ ಎಂದು ಜರ್ಮನ್ ಛಾನ್ಸಲರ್ ಒಲಾಫ್ ಶ್ಹಾಲ್ಜ್ ಬುಧವಾರ ಪ್ರತಿಕ್ರಿಯಿಸಿದ್ದಾರೆ. 1972ರ ಮ್ಯೂನಿಚ್ ಒಲಿಂಪಿಕ್ಸ್ ಸಂದರ್ಭ ಪೆಲೆಸ್ತೀನಿಯನ್ ಬಂದೂಕುಧಾರಿಗಳು ಇಸ್ರೇಲ್ ತಂಡವನ್ನು ಒತ್ತೆಯಾಳುಗಳನ್ನಾಗಿ ಇರಿಸಿದ ಪ್ರಕರಣದ ಬಗ್ಗೆ (ಈ ಪ್ರಕರಣದಲ್ಲಿ ಇಸ್ರೇಲ್ನ 11 ಕ್ರೀಡಾಳುಗಳು ಹಾಗೂ ಕೋಚ್ ಹತರಾಗಿದ್ದರು) ಕ್ಷಮೆ ಯಾಚಿಸುವಿರಾ ಎಂದು ಮಂಗಳವಾರ ಶ್ಹಾಲ್ಜ್ರೊಂದಿಗಿನ ಜಂಟಿ ಸುದ್ಧಿಗೋಷ್ಟಿಯ ಸಂದರ್ಭ ಅಬ್ಬಾಸ್ರನ್ನು ಮಾಧ್ಯಮದವರು ಪ್ರಶ್ನಿಸಿದ್ದರು.

 ಇದಕ್ಕೆ ನೇರ ಉತ್ತರ ನೀಡದ ಅಬ್ಬಾಸ್, ಅದರ ಬದಲು ಈ ಪ್ರಕರಣವನ್ನು ಪೆಲೆಸ್ತೀನ್ ಪ್ರದೇಶದಲ್ಲಿನ ಪರಿಸ್ಥಿತಿಗೆ ಹೋಲಿಸಿದ್ದರು ಮತ್ತು 1947ರಿಂದ ಪೆಲೆಸ್ತೀನೀಯರ ವಿರುದ್ಧ ಇಸ್ರೇಲ್ 50 ಹತ್ಯಾಕಾಂಡ ಮತ್ತು 50 ಕಗ್ಗೊಲೆಗಳನ್ನು ನಡೆಸಿದೆ ಎಂದು ಆರೋಪಿಸಿದ್ದರು. ‌

ಪೆಲೆಸ್ತೀನಿಯನ್ ಅಧ್ಯಕ್ಷರ ಅತಿರೇಕದ ಹೇಳಿಕೆಗಳಿಂದ ನಾನು ಅಸಹ್ಯಗೊಂಡಿದ್ದೇನೆ ಎಂದು ಶ್ಹಾಲ್ಜ್ ಟ್ವೀಟ್ ಮಾಡಿದ್ದಾರೆ. ನಮಗೆ, ನಿರ್ದಿಷ್ಟವಾಗಿ ಜರ್ಮನ್ನರಿಗೆ, ಹತ್ಯಾಕಾಂಡದ ಹೋಲಿಕೆಯ ಯಾವುದೇ ಸಾಪೇಕ್ಷತೆ ಅಸಹನೀಯ ಮತ್ತು ಸ್ವೀಕಾರಾರ್ಹವಲ್ಲ. ಹತ್ಯಾಕಾಂಡದ ಅಪರಾಧವನ್ನು ನಿರಾಕರಿಸುವ ಯಾವುದೇ ಪ್ರಯತ್ನವನ್ನು ನಾನು ಖಂಡಿಸುತ್ತೇನೆ ಎಂದವರು ಹೇಳಿದ್ದಾರೆ. ಆದರೆ ಅಬ್ಬಾಸ್ ಹೇಳಿಕೆಯನ್ನು ಪತ್ರಿಕಾಗೋಷ್ಟಿಯಲ್ಲೇ ಖಂಡಿಸದ ಬಗ್ಗೆ ಶ್ಹಾಲ್ಜ್ ವಿರುದ್ಧವೂ ವ್ಯಾಪಕ ಅಸಹನೆ, ಟೀಕೆ ವ್ಯಕ್ತವಾಗಿದೆ.

ಶ್ಹಾಲ್ಜ್ ತಕ್ಷಣ ಪ್ರತಿಕ್ರಿಯೆ ಮತ್ತು ಸ್ಪಷ್ಟನೆ ನೀಡುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು ಎಂದು ‘ಸ್ಪೀಗೆಲ್’ ಪತ್ರಿಕೆ ಬರೆದಿದೆ. ಇಸ್ರೇಲ್ ಪ್ರಧಾನಿ ಯಾಪಿರ್ ಲ್ಯಾಪಿಡ್ ಅವರೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಹ್ಮೂದ್ ಅಬ್ಬಾಸ್ ಜರ್ಮನ್ ನೆಲದಲ್ಲಿ ನಿಂತು ಇಸ್ರೇಲ್ 50 ಹತ್ಯಾಕಾಂಡ ನಡೆಸಿದೆ ಎಂದು ಆರೋಪಿಸಿರುವುದು ನೈತಿಕ ಅವಮಾನ ಮಾತ್ರವಲ್ಲ, ದೈತ್ಯ ಸುಳ್ಳು ಕೂಡಾ ಆಗಿದೆ .

ಒಂದೂವರೆ ಮಿಲಿಯನ್ ಮಕ್ಕಳ ಸಹಿತ 6 ಮಿಲಿಯನ್ ಯೆಹೂದಿಗಳು ಹತ್ಯಾಕಾಂಡದಲ್ಲಿ ಹತರಾಗಿದ್ದಾರೆ. ಇತಿಹಾಸವು ಅವರನ್ನೆಂದೂ ಕ್ಷಮಿಸದು ಎಂದವರು ಟ್ವೀಟ್ ಮಾಡಿದ್ದಾರೆ. ಅಬ್ಬಾಸ್ ಮಾತುಗಳು ಭಯಾನಕವಾಗಿದೆ ಎಂದು ಯಾದ್ ವಷೆಮ್(ಹತ್ಯಾಕಾಂಡದ ಸಂತ್ರಸ್ತರಿಗೆ ಇಸ್ರೇಲ್ನ ಅಧಿಕೃತ ಸ್ಮಾರಕ)ನ ಅಧ್ಯಕ್ಷ ಡ್ಯಾನಿ ಡಯಾನ್ ಹೇಳಿದ್ದಾರೆ. ತನ್ನ ನೆಲದಲ್ಲಿ ನಡೆಸಿದ ಈ ಅಕ್ಷಮ್ಯ ವರ್ತನೆಗೆ ಜರ್ಮನ್ ಸರಕಾರ ಸೂಕ್ತವಾಗಿ ಪ್ರತಿಕ್ರಿಯಿಸಬೇಕು ಎಂದವರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News