ʼಉಡುಪಿ ರಜತ ಮಹೋತ್ಸವʼ ಹಬ್ಬದಂತೆ ಆಚರಣೆಗೆ ಶಾಸಕ ರಘುಪತಿ ಭಟ್ ಕರೆ

Update: 2022-08-17 15:44 GMT

ಉಡುಪಿ, ಆ.17: ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ಜಿಲ್ಲೆಯ ಜನತೆ ಹಾಗೂ ಸಂಘ ಸಂಸ್ಥೆಗಳಿಗೆ ಶಾಸಕ ಕೆ.ರಘುಪತಿ ಭಟ್ ಕರೆ ನೀಡಿದ್ದಾರೆ.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಉಡುಪಿ ರಜತ ಉತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲಾ ಕೇಂದ್ರಕ್ಕೆ ಜನಸಾಮಾನ್ಯರು ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲು ಅನುಕೂಲವಾಗಲು  ಉಡುಪಿ ಜಿಲ್ಲೆಯ ರಚನೆ ಮಾಡಬೇಕೆಂಬ ಜನರ ಒತ್ತಾಸೆಯನ್ನು ಅರಿತು ಅಂದಿನ ಸರಕಾರ ಉಡುಪಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿತ್ತು.  ಆ.25ಕ್ಕೆ ಜಿಲ್ಲೆಯಾಗಿ  25 ವರ್ಷ ಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯು ಇದುವರೆಗೆ ಬೆಳದು ಬಂದಿರುವ ಹಾದಿ ಮತ್ತು ಇನ್ನೂ  ಆಗಬೇಕಿರುವ ಅಭಿವೃಧ್ದಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿದೆ. ಹೀಗಾಗಿ  ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಆ.25ರಂದು ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್ ಹಾಗೂ ಸಚಿವ ಸಂಪುದ ವಿವಿಧ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರಘುಪತಿ ಭಟ್ ನುಡಿದರು.  

ರಜತ ಮಹೋತ್ಸವದ ಅಂಗವಾಗಿ ಉಡುಪಿಯ ಬೋರ್ಡ್ ಶಾಲೆಯಿಂದ ಅಜ್ಜರಕಾಡು ಕ್ರೀಡಾಂಗಣದವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಆಯೋಜಿಸುವಂತೆ ತಿಳಿಸಿದ ಅವರು,  ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ಹಾಗೂ  ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.

ಆ.24ರಿಂದ ನೇಷನ್ ಫಸ್ಟ್ ತಂಡ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿ ಗಳಿಂದ  ಜಿಲ್ಲೆಯಾದ್ಯಂತ  75 ಕಿ.ಮೀ.ಗಳ ಓಟದ ಕಾರ್ಯಕ್ರಮ ನಡೆಯಲಿದೆ. ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಜಿಲ್ಲೆಯ ಆರಂಭದ ದಿನಗಳಿಂದ ಇದುವರೆಗಿನ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಸಿಇಓ ಪ್ರಸನ್ನ ಎಚ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News