×
Ad

ಆಶಿಕ್ ಮಾಡಿದ ಅಪಘಾತದಿಂದ 11 ವರ್ಷದಿಂದ ನನ್ನ ಜೀವನ ನರಕ; ಕೋರ್ಟ್ ಆದೇಶಿಸಿದ ಪರಿಹಾರವನ್ನು ಹೋರಾಟಗಾರರು ಕೊಡಿಸಲಿ: ಸಂತ್ರಸ್ಥ ದೇವೇಂದ್ರ ಸುವರ್ಣ ಮನವಿ

"ಪೊಲೀಸರು ದುರ್ವತನೆ ತೋರಿಲ್ಲ; ಅಕ್ಷತಾ ಆರೋಪ ಸುಳ್ಳು"

Update: 2025-12-18 21:22 IST

ಉಡುಪಿ, ಡಿ.18: ಅಕ್ಷತಾ ಪೂಜಾರಿ ಎಂಬ ವಿದ್ಯಾರ್ಥಿನಿಯ ಮೇಲೆ ಪೊಲೀಸರು ದುರ್ವರ್ತನೆ ತೋರಿಸಿದ್ದಾರೆ ಎಂಬ ಆಕೆಯ ಪರ ಹೋರಾಟಗಾರರ ಆರೋಪ ಸಂಪೂರ್ಣ ಸುಳ್ಳು. ಪೊಲೀಸರು ಅವರ ಮನೆ ಒಳಗೂ ಹೋಗಿಲ್ಲ. ಆಗ ನಾನು ಕೂಡಾ ಅವರ ಜೊತೆಗಿದ್ದೆ. ಅವರ ಆರೋಪ ನಿರಾಧಾರ ಎಂದು ಪ್ರಕರಣದಲ್ಲಿ ಸಂತ್ರಸ್ಥರಾಗಿರುವ ವಡ್ಡರ್ಸೆಯ ದೇವೇಂದ್ರ ಸುವರ್ಣ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಪತ್ನಿ ಶಕುಂತಳಾ ಹಾಗೂ ತಾಯಿ ಪದ್ದಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಳೆದ 11 ವರ್ಷಗಳ ಬದುಕಿನ ಕತೆ-ವ್ಯಥೆ ಯನ್ನು ಹಂಚಿಕೊಂಡ ದೇವೇಂದ್ರ ಸುವರ್ಣ, ಈ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ. ದುಡಿದು ತಿನ್ನುತಿದ್ದ ತಾನು ಇಂದು 11 ವರ್ಷಗಳಿಂದ ನರಕಯಾತನೆ ಅನುಭವಿಸುತಿದ್ದೇನೆ. ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆಯನ್ನು ನಂಬಿ ನ್ಯಾಯಾಲಯದ ಮೂಲಕ ಹೋರಾಡುತ್ತಿರುವ ನನಗೆ ಎಲ್ಲಾ ಕಡೆಯಿಂದಲೂ ಅನ್ಯಾಯವೇ ಆಗುತ್ತಿದೆ ಎಂದರು.

ದುಡಿಯಲು ಅಸಾಧ್ಯವಾದ ನನಗೆ ನ್ಯಾಯಾಲಯ ನೀಡಿದ ಪರಿಹಾರ ಮರೀಚಿಕೆಯಾಗಿದೆ. ಎಲ್ಲಕ್ಕೂ ನಾನು ತಾಯಿ-ಪತ್ನಿಯನ್ನೇ ಅವಲಂಬಿಸಿದ್ದೇನೆ. ನ್ಯಾಯಕ್ಕಾಗಿ ಈವರೆಗೆ ಏಕಾಂಗಿಯಾಗಿ ಹೋರಾಡುತಿದ್ದ ನಾನೂ, ಅಕ್ಷತಾರ ಸುಳ್ಳು ಆರೋಪವನ್ನು ನಂಬಿ ಅವರ ಸಮುದಾಯ ಹೋರಾಟಕ್ಕಿಳಿದ ಬಳಿಕ ನಾನು ಕೂಡಾ ನನ್ನ ಸಮುದಾಯದ (ಮೊಗವೀರ) ಜನರ ಬೆಂಬಲದೊಂದಿಗೆ ಹೋರಾಟ ನಡೆಸುವ ಬಗ್ಗೆ ಯೋಜನೆ ಮಾಡುತಿದ್ದೇನೆ ಎಂದರು.

ಅಕ್ಷತಾ ಪೂಜಾರಿ ಎಲ್ಲರೂ ನಂಬುವ ರೀತಿಯಲ್ಲಿ ಪೊಲೀಸರು ಹಾಗೂ ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಸುಳ್ಳು ಆರೋಪಗಳನ್ನು ಮಾಡುತಿದ್ದಾರೆ. ಸತ್ಯ ಇಂದಲ್ಲ ನಾಳೆ ತಿಳಿದೇ ತಿಳಿಯುತ್ತದೆ. ಇಡೀ ಪ್ರಕರಣದಲ್ಲಿ ನಾನು ನ್ಯಾಯಬದ್ಧನಾಗಿ ನಡೆದುಕೊಂಡಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇರಿಸಿಕೊಂಡಿದ್ದೇನೆ. ಆದರೆ ನಿನ್ನೆಯ ಹೋರಾಟದಲ್ಲಿ ನನ್ನ ಮೇಲೆಯೇ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದಾರೆ ಎಂದರು.

2014ರಲ್ಲಿ ಆಶಿಕ್ ಬಿನ್ ಅಶೋಕ ಚಾಲನಾ ಪರವಾನಿಗೆ ಇಲ್ಲದೇ ಬೈಕ್‌ನಲ್ಲಿ ಬಂದು ನನಗೆ ಢಿಕ್ಕಿ ಹೊಡೆದಾಗ 17 ವರ್ಷ ಪ್ರಾಯದ ಅಪ್ರಾಪ್ತನಾಗಿದ್ದ. ಎರಡು ವಾರಗಳ ಬಳಿಕ ಪ್ರಜ್ಞೆ ಬಂದ ನಾನು ಒಂದು ವರ್ಷ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದ ಬಳಿಕ ಕೇಸು ದಾಖಲಿಸಿದ್ದೆ. ನ್ಯಾಯಾಲಯದಲ್ಲಿ ಏಳು ವರ್ಷ ವಿಚಾರಣೆಯ ಬಳಿಕ ನನಗೆ 20ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿತ್ತು. ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈ ವರ್ಷ ದಸ್ತಗಿರಿ ಮಾಡಲು ಕೋರ್ಟ್ ಅಮೀನರಿಗೆ ಆದೇಶಿಸಿತ್ತು ಎಂದು ದೇವೇಂದ್ರ ಸುವರ್ಣ ವಿವರಿಸಿದರು.

ಕೋರ್ಟ್‌ನ ವಾರಂಟ್‌ಗೆ ಸಂಬಂಧಿಸಿದಂತೆ ಆತನ ಇರುವಿಕೆ ಪತ್ತೆ ಹಚ್ಚಿ ಪೊಲೀಸರು ಉಪ್ಪೂರಿನಲ್ಲಿರುವ ಆಶಿಕ್‌ನ ಸಂಬಂಧಿಕರ ಮನೆಗೆ ಬೆಳಗಿನ ಜಾವ ಹೋದಾಗ ಮನೆ ತೋರಿಸಲು ನನ್ನನ್ನೂ ಪೊಲೀಸರು ಕರೆದೊಯ್ದಿದ್ದರು. ಪೊಲೀಸರು ಅಕ್ಷತಾ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆ ಮಾಡಿಲ್ಲ. ನಾನು ಮನೆಯಿಂದ ಸ್ವಲ್ಪ ದೂರದಲ್ಲಿ ನಿಂತಿದ್ದೆ. ಪೊಲೀಸರು ಮನೆಯ ಒಳಗೂ ಪ್ರವೇಶ ಮಾಡಿಲ್ಲ. ಇಡೀ ಪ್ರಕರಣವನ್ನು ಪೊಲೀಸರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಸತ್ಯ ತಿಳಿದೇ ತಿಳಿಯುತ್ತದೆ ಎಂದು ಸುವರ್ಣ ಹೇಳಿದರು.

ಇದು ಸತ್ಯ ಸಂಗತಿಯಾದರೆ, ಇದೀಗ ನನ್ನ ಮೇಲೆ ಹಾಗೂ ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ. ನ್ಯಾಯಾಲಯದಿಂದ ವಾರಂಟ್ ಹೊರಟ ಬಳಿಕ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಆಶಿಕ್ ನನಗೆ ನೀಡುವಂತೆ ನ್ಯಾಯಾಲಯ ತಿಳಿಸಿದ ಪರಿಹಾರವನ್ನೂ ನೀಡುತ್ತಿಲ್ಲ. ಸುಳ್ಳು ಹೇಳಿಕೆ ನಂಬಿ ಹೋರಾಟ ನಡೆಸಿದವರು ಆಶಿಕ್‌ನಿಂದ ನನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಅವರು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News