ಬುಲ್ಡೋಝರ್‌ ಮೇಲೆ ಪ್ರಧಾನಿ ಮೋದಿ, ಆದಿತ್ಯನಾಥ್‌ ಚಿತ್ರ; ಧ್ವಂಸ ಕಾರ್ಯಾಚರಣೆ ಖಂಡಿಸಿ ಅಮೇರಿಕಾದಲ್ಲಿ ಪ್ರತಿಭಟನೆ

Update: 2022-08-17 18:22 GMT
Photo: Indian American Muslim Council/Twitter

ನ್ಯೂಜೆರ್ಸಿ: ಆಗಸ್ಟ್ 14 ರಂದು ನ್ಯೂಜೆರ್ಸಿಯಲ್ಲಿ ನಡೆದ ಸ್ವಾತಂತ್ರ್ಯ ದಿನದ ಮೆರವಣಿಗೆಯಲ್ಲಿ ಹಿಂದುತ್ವ ಗುಂಪುಗಳು ಬುಲ್ಡೋಝರ್‌  ಅನ್ನು ಬಳಸಿದ್ದು "ದ್ವೇಷದ ಲಜ್ಜೆಗೆಟ್ಟ ಪ್ರದರ್ಶನ" ಎಂದು ಯುನೈಟೆಡ್ ಸ್ಟೇಟ್ಸ್‌ ಮಾನವ ಹಕ್ಕುಗಳ ಗುಂಪುಗಳು ಹೇಳಿವೆ.

ಬುಲ್ಡೋಝರ್‌  ಬಳಕೆಯನ್ನು ಟೀಕಿಸಲು ಎಡಿಸನ್ ಟೌನ್‌ಶಿಪ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಇಬ್ಬರು ಸ್ಥಳೀಯ ಮೇಯರ್‌ಗಳು ಮತ್ತು  ಕನಿಷ್ಠ ಮೂರು ಮಾನವ ಹಕ್ಕುಗಳ ಗುಂಪುಗಳು ಬುಲ್ಡೋಝರ್‌ ಬಳಕೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿವೆ.

ಮಾನವ ಹಕ್ಕುಗಳಿಗಾಗಿ ಹಿಂದೂಗಳು ಗುಂಪು (Hindus for Human Rights) ಮಂಗಳವಾರ "ಸಾಂಕೇತಿಕತೆಯಿಂದ ಆಳವಾಗಿ ವಿಚಲಿತವಾಗಿದೆ" ಎಂದು ಹೇಳಿದೆ. ಬುಲ್ಡೋಝರ್‌ಗಳು "ರಾಜ್ಯ ದಮನ ಮತ್ತು ಭಾರತದ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಸಂಕೇತವಾಗಿದೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಪರೇಡ್‌ನಲ್ಲಿ ಬಳಸಲಾದ ಬುಲ್ಡೋಝರ್‌ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಹಾಕಲಾಗಿದ್ದು, ಹಿಂದಿಯಲ್ಲಿ ಬರೆಯಲಾದ “ಬಾಬಾ ಕಾ ಬುಲ್ಡೋಝರ್‌ ” ಎಂಬ ಫಲಕವನ್ನು ಅಳವಡಿಸಲಾಗಿತ್ತು.  

ಕಳೆದ ಕೆಲವು ತಿಂಗಳುಗಳಿಂದ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ ಬಿಜೆಪಿ ರಾಜ್ಯ ಸರ್ಕಾರಗಳು ಮತ್ತು ದಿಲ್ಲಿಯಲ್ಲಿ ಬಿಜೆಪಿ ಪಕ್ಷ ನಡೆಸುತ್ತಿರುವ ನಾಗರಿಕ ಸಂಸ್ಥೆಗಳು ಅತಿಕ್ರಮಣಗಳನ್ನು ತೆಗೆದುಹಾಕುವ ಹೆಸರಿನಲ್ಲಿ ಹಲವಾರು ಧ್ವಂಸ ಕಾರ್ಯಾಚರಣೆಗಳನ್ನು ನಡೆಸಿವೆ. ಈ ಹೆಚ್ಚಿನ ಕಾರ್ಯಾಚರಣೆಗಳು ಮುಸ್ಲಿಮರ ಒಡೆತನದ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದವು.

ಆರೋಪಿಗಳ ಮನೆಯನ್ನು ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಮಾದರಿಯನ್ನು ನಿಯಮಿತವಾಗಿ ಮಾಡಲಾಗುತ್ತಿದೆ.

 ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್‌ನ ನ್ಯೂಜೆರ್ಸಿ ಮತ್ತು ಹಕ್ಕುಗಳ ಗುಂಪುಗಳಾದ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಮೆರವಣಿಗೆಯಲ್ಲಿ ಬುಲ್ಡೋಝರ್‌  ಬಳಕೆಯನ್ನು ಖಂಡಿಸುವ ಹೇಳಿಕೆಗಳನ್ನು ನೀಡಿದೆ.
 

ಇದನ್ನೂ ಓದಿ | ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ ಆರೋಪ: ಬಂಧಿತ ವ್ಯಕ್ತಿಯ ಕುಟುಂಬಸ್ಥರ ಮನೆಯನ್ನು ಲೂಟಿಗೈದ ಹಿಂದುತ್ವವಾದಿಗಳು 

"ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ತಮ್ಮ ಪರಂಪರೆ ಮತ್ತು ಸ್ವಾತಂತ್ರ್ಯವನ್ನು ಆಚರಿಸುವ ಭಾರತೀಯ ಅಮೆರಿಕನ್ನರ ಹಕ್ಕನ್ನು ನಾವು ಬೆಂಬಲಿಸುತ್ತೇವೆ, ಬುಲ್ಡೋಝರ್‌  ಬಳಕೆಯನ್ನು ಮತ್ತು ಆಳವಾದ ಮುಸ್ಲಿಂ ವಿರೋಧಿ ದಾಖಲೆ ಹೊಂದಿರುವ ಹಿಂದೂ ರಾಷ್ಟ್ರೀಯತಾವಾದಿ ವ್ಯಕ್ತಿಗಳ ವೈಭವೀಕರಣವನ್ನು ನಾವು ಖಂಡಿಸುತ್ತೇವೆ" ಎಂದು ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಸೆಲೆದಿನ್ ಮಕ್ಸುತ್ ಹೇಳಿದರು.

ಎಡಿಸನ್ ಮತ್ತು ವುಡ್‌ಬ್ರಿಡ್ಜ್ ಟೌನ್‌ಶಿಪ್‌ಗಳ ಮೇಯರ್‌ಗಳಾದ ಸಮಿಪ್ ಜೋಶಿ ಮತ್ತು ಜಾನ್ ಇ ಮೆಕ್‌ಕಾರ್ಮ್ಯಾಕ್ ಮತ್ತು ಪರೇಡ್‌ನಲ್ಲಿ ಭಾಗವಹಿಸಿದ್ದ ನ್ಯೂಜೆರ್ಸಿ ಅಸೆಂಬ್ಲಿ ಸ್ಪೀಕರ್ ಕ್ರೇಗ್ ಕೋಫ್ಲಿನ್  ಅವರಲ್ಲಿ ಬುಲ್ಡೋಝರ್‌  ಕಾರ್ಯಾಚರಣೆಯನ್ನು ಟೀಕಿಸುವಂತೆ ಒತ್ತಾಯಿಸಲಾಗಿದೆ.

ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್‌ನ ಅಧ್ಯಕ್ಷ ಮಹಮ್ಮದ್ ಜವಾದ್ ಮಾತನಾಡಿ ಭಾರತದಲ್ಲಿ ಮುಸ್ಲಿಮರು ಸಾಮೂಹಿಕ ಹಿಂಸಾಚಾರಕ್ಕೆ ಗುರಿಯಾಗುತ್ತಾರೆ ಎಂದು ತಿಳಿಸಿದ್ದಾರೆ.

"ಇಬ್ಬರು ಹಿಂದೂ ಪ್ರಾಬಲ್ಯವಾದಿ ನಾಯಕರ ಚಿತ್ರಗಳನ್ನು ಹೊಂದಿರುವ ಬುಲ್ಡೋಝರ್‌ಗಳೊಂದಿಗೆ ಮೆರವಣಿಗೆ ಮಾಡುವುದರ ಅರ್ಥವನ್ನು ನಾವು ಸಂದರ್ಭೋಚಿತಗೊಳಿಸಬೇಕಾಗಿದೆ. ಇಂದು ಭಾರತದಲ್ಲಿ, 200 ಮಿಲಿಯನ್ ಮುಸ್ಲಿಮರು ಮೂಲಭೂತವಾದ ಬಹುಸಂಖ್ಯಾತವಾದಿಗಳ ಸಾಮೂಹಿಕ ಹಿಂಸಾಚಾರದ ಅಪಾಯದಲ್ಲಿದ್ದಾರೆ. ಈ ಬುಲ್ಡೋಜರ್‌ಗಳೊಂದಿಗೆ ಮೆರವಣಿಗೆ ಮಾಡುವುದು ಬಲವಂತದ ನಿರಾಶ್ರಿತತೆ ಮತ್ತು ದುರ್ಬಲ ಅಲ್ಪಸಂಖ್ಯಾತರ ವಿರುದ್ಧ ಸಾಮೂಹಿಕ ಹಿಂಸಾಚಾರಕ್ಕೆ ಬೆಂಬಲವನ್ನು ತೋರಿಸುತ್ತದೆ.” ಎಂದು ಜವಾದ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News