ಬಿಹಾರ ಸಚಿವರ ಪೈಕಿ ಶೇ. 72ರಷ್ಟು ಮಂದಿ ವಿರುದ್ಧ ಅಪರಾಧ ಪ್ರಕರಣ : ಎಡಿಆರ್

Update: 2022-08-18 02:33 GMT
ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಸೇರಿದಂತೆ 33 ಸಚಿವರ ಪೈಕಿ 23 ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಇವೆ ಎಂಬ ಅಂಶವನ್ನು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (Association for Democratic Rights) ಬಹಿರಂಗಪಡಿಸಿದೆ.

ಸಚಿವರು ನೀಡಿರುವ ಸ್ವಯಂ ಘೋಷಣೆಯಲ್ಲಿ ಈ ಅಂಶವಿದೆ ಎಂದು ಬುಧವಾರ ಎಡಿಆರ್ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. ಅಂದರೆ ಸಚಿವರ ಪೈಕಿ ಶೇಕಡ 72ರಷ್ಟು ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಇವೆ. ಒಟ್ಟಾರೆ ಆರ್‌ಜೆಡಿಯ 17 ಮಂದಿ, ಜೆಡಿಯುನ 11 ಮಂದಿ, ಕಾಂಗ್ರೆಸ್‍ನ ಇಬ್ಬರು, ಎಚ್‍ಎಎಂ(ಎಸ್)ನ ಒಬ್ಬರು ಹಾಗೂ ಪಕ್ಷೇತರ ಶಾಸಕರೊಬ್ಬರು ಬಿಹಾರ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ವಿಶ್ಲೇಷಿಸಿ ಎಡಿಆರ್ ವರದಿ ಸಿದ್ಧಪಡಿಸಿದ್ದು, 17 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ ಎಂದು ಹೇಳಿದೆ. ಈ ಪೈಕಿ ಆರ್‌ಜೆಡಿಯ 11 ಮಂದಿ, ಜೆಡಿಯುನ ಮೂವರು, ಕಾಂಗ್ರೆಸ್, ಎಚ್‍ಎಎಂ(ಎಸ್)ನ ತಲಾ ಒಬ್ಬರು ಶಾಸಕರು ಮತ್ತು ಪಕ್ಷೇತರರೊಬ್ಬರು ಸೇರಿದ್ದಾರೆ. ವಿಧಾನ ಪರಿಷತ್ ಸದಸ್ಯ ಅಶೋಕ್ ಕುಮಾರ್ ಅವರ ಅಫಿಡವಿಟ್ ಲಭ್ಯವಿಲ್ಲದ ಕಾರಣ ಅವರನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.

ಹಣಕಾಸು ಹಿನ್ನೆಲೆಯಲ್ಲಿ ನೋಡಿದರೆ, ಶೇಕಡ 84ರಷ್ಟು ಮಂದಿ ಅಂದರೆ 27 ಸಚಿವರು ಕೋಟ್ಯಧಿಪತಿಗಳು. ಇವರಲ್ಲಿ ಆರ್‌ಜೆಡಿಯ 16, ಜೆಡಿಯುನ ಒಂಬತ್ತು ಮಂದಿ, ಎಚ್‍ಎಎಂ(ಎಸ್) ಹಾಗೂ ಪಕ್ಷೇತರ ಶಾಸಕರು ಸೇರಿದ್ದಾರೆ. 32 ಸಚಿವರ ಸರಾಸರಿ ಆಸ್ತಿ 5.82 ಕೋಟಿ ರೂಪಾಯಿ. ಆರ್‌ಜೆಡಿ ಸಚಿವ ಸಮೀರ್ ಕುಮಾರ್ ಮಹಾಸೇಥ್ ಅತ್ಯಂತ ಶ್ರೀಮಂತ ಸಚಿವ. ಇವರ ಆಸ್ತಿಯ ಮೌಲ್ಯ 25.45 ಕೋಟಿ ರೂಪಾಯಿ ಕಾಂಗ್ರೆಸ್ ಶಾಸಕ ಮುರಾರಿ ಪ್ರಸಾದ್ ಗೌತಮ್ ಕನಿಷ್ಠ ಅಂದರೆ 17.66 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಆರ್‌ಜೆಡಿ ಸಚಿವರ ಸರಾಸರಿ ಆಸ್ತಿ ಮೌಲ್ಯ 7.59 ಕೋಟಿ ಆಗಿದ್ದರೆ, ಜೆಡಿಯು ಸಚಿವರ ಆಸ್ತಿ ಮೌಲ್ಯ 4.55 ಕೋಟಿ ರೂಪಾಯಿ. ಎಚ್‍ಎಎಂ(ಎಸ್) ಸಚಿವ 2.57 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಪಕ್ಷೇತರ ಸಚಿವನ ಆಸ್ತಿ ಮೌಲ್ಯ 3.68 ಕೋಟಿ ರೂಪಾಯಿ. ಕಾಂಗ್ರೆಸ್ ಸಚಿವರ ಆಸ್ತಿ ಮೌಲ್ಯ 53.79 ಲಕ್ಷ ರೂಪಾಯಿ ಆಗಿದೆ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News