ರೊಹಿಂಗ್ಯಾಗಳಿಗೆ ನಗರದಲ್ಲಿ ನೆಲೆಯೂರಲು ದಿಲ್ಲಿ ಸರಕಾರ ಅವಕಾಶ ನೀಡುವುದಿಲ್ಲ: ಮನೀಶ್‌ ಸಿಸೋಡಿಯ

Update: 2022-08-18 07:35 GMT

ಹೊಸದಿಲ್ಲಿ: ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, "ರೊಹಿಂಗ್ಯಾ ನಿರಾಶ್ರಿತರನ್ನು ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಲು ಆಮ್ ಆದ್ಮಿ ಪಕ್ಷದ (Aam Aadmi Party) ನೇತೃತ್ವದ ಸರ್ಕಾರ ಅವಕಾಶ ನೀಡುವುದಿಲ್ಲ" ಎಂದು ಬುಧವಾರ ಹೇಳಿದ್ದಾರೆ. ಗೃಹ ಸಚಿವಾಲಯವು(Home Ministry) ರೊಹಿಂಗ್ಯಾ ಮುಸ್ಲಿಮರಿಗೆ(Rohingya Muslims) ಫ್ಲಾಟ್‌ಗಳು ಮತ್ತು ಭದ್ರತೆಯ ಭರವಸೆ ನೀಡುವ ಕೇಂದ್ರ ಸಚಿವರ ಹೇಳಿಕೆಯನ್ನು ವಿರೋಧಿಸಿದ ಗಂಟೆಗಳ ನಂತರ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ.

"ರೊಹಿಂಗ್ಯಾಗಳು ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಲು ಬಿಡುವುದಿಲ್ಲ ಎಂದು ದಿಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ ಮತ್ತು ಈ ಕ್ರಮವನ್ನು ತನ್ನ ತೀವ್ರವಾಗಿ ವಿರೋಧಿಸುತ್ತದೆ" ಎಂದು ಸಿಸೋಡಿಯಾ(Manish Sisodia) ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. "ಈ ರಾಷ್ಟ್ರ ಮತ್ತು ಅದರ ಜನರ ಭದ್ರತೆಯಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ" ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೊಹಿಂಗ್ಯಾ ನಿರಾಶ್ರಿತರನ್ನು ದಿಲ್ಲಿಯ ಬಕ್ಕರ್‌ವಾಲಾದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ ಗೊತ್ತುಪಡಿಸಿದ ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ರಾತ್ರಿಯಿಡೀ ಪೊಲೀಸ್ ರಕ್ಷಣೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಪ್ರಕಟಿಸಿದ್ದರು.

ಆದರೆ, ಪುರಿ ಅವರ ಘೋಷಣೆಯ ಕೆಲವೇ ಗಂಟೆಗಳ ನಂತರ, ಗೃಹ ಸಚಿವ ಅಮಿತ್ ಶಾ(Amit sha) ಅವರ ಕಚೇರಿ ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದು ನಿರಾಕರಿಸಿದೆ.

ಗೃಹ ಸಚಿವಾಲಯದ ಹೇಳಿಕೆಯು "ಅಕ್ರಮ ವಿದೇಶಿಗರನ್ನು" ಕಾನೂನಿನ ಪ್ರಕಾರ ಬಂಧನ ಕೇಂದ್ರಗಳಲ್ಲಿ ಇರಿಸಬೇಕು ಎಂದು ಹೇಳಿದೆ. ನಿರಾಶ್ರಿತರು ತಂಗಿರುವ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸುವಂತೆ ದಿಲ್ಲಿ ಸರ್ಕಾರಕ್ಕೆ ಸಚಿವಾಲಯ ನಿರ್ದೇಶನ ನೀಡಿದೆ. ಬುಧವಾರ ಸಂಜೆ, ಗೃಹ ಸಚಿವಾಲಯದ ಹೇಳಿಕೆಯನ್ನು ಪುರಿ ಟ್ವೀಟ್ ಮಾಡಿ, ಈ ವಿಷಯದ ಬಗ್ಗೆ ಇದು ಸರಿಯಾದ ನಿಲುವು ಎಂದು ಹೇಳಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ, ನಿರಾಶ್ರಿತರನ್ನು ಅಕ್ರಮವಾಗಿ ನೆಲೆಸಲು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರವು ಸಂಚು ನಡೆಸುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News