ಸಿಎಎ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಆರಂಭಗೊಂಡ ಪ್ರತಿಭಟನೆಗಳು

Update: 2022-08-18 11:25 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ(Citizenship Amendment Act)ಯ ವಿರುದ್ಧ ಪ್ರತಿಭಟನೆಗಳನ್ನು ಈಶಾನ್ಯ ಭಾರತದ ವಿದ್ಯಾರ್ಥಿ ಸಂಘಟನೆಗಳು ಸುಮಾರು ಎರಡು ವರ್ಷಗಳ ನಂತರ ಮರುಆರಂಭಿಸಿವೆ. ಈ ವಿವಾದಿತ ಕಾಯಿದೆಯ ವಿರುದ್ಧ ಎರಡು ವರ್ಷಗಳ ಹಿಂದೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದರೂ ನಂತರ ಕೋವಿಡ್ ಸಾಂಕ್ರಾಮಿಕದಿಂದಾಗಿ ತಣ್ಣಗಾಗಿತ್ತು ಎಂದು Hindustan Times ವರದಿ ಮಾಡಿದೆ.

ಆದರೆ ಈಶಾನ್ಯ ಭಾರತದ ವಿದ್ಯಾರ್ಥಿ ಸಂಘಟನೆಗಳು ಬುಧವಾರ ಪ್ರತಿಭಟನೆಯನ್ನು ಮರುಆರಂಭಿಸಿವೆ. ಈ ಕಾಯಿದೆ ಜಾರಿಯಿಂದಾಗಿ ಬಾಂಗ್ಲಾದೇಶದಿಂದ ವಲಸಿಗರ ಪ್ರವೇಶಕ್ಕೆ ಕಾರಣವಾಗಬಹುದೆಂಬ ಭಯ ಹಲವು ಸಂಘಟನೆಗಳಿಗಿವೆ.

ಈ ಕಾಯಿದೆ ಕೋಮು ಸ್ವರೂಪವನ್ನು ಹೊಂದಿದೆ ಹಾಗೂ ಒಂದು ಪ್ರಾಂತ್ಯದ ಮೂಲನಿವಾಸಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ಸಂಘಟನೆಗಳ ಕೇಂದ್ರ ಸಂಸ್ಥೆಯಾಗಿರುವ ನಾರ್ತ್ ಈಸ್ಟರ್ನ್ ಸ್ಟೂಡೆಂಟ್ಸ್ ಯೂನಿಯನ್ ಹೇಳಿದೆ.

"ಈ ಕಾಯಿದೆಯು  ಅಸ್ಸಾಂ ಹಾಗೂ ಪ್ರಾಂತ್ಯದ ಇತರ ರಾಜ್ಯಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬ ನಮ್ಮ ನಿಲುವು ಅಚಲವಾಗಿದೆ,'' ಎಂದು ಯೂನಿಯನ್ ಅಧ್ಯಕ್ಷ ಸಾಮುವೆಲ್ ಜೈರ್ವಾ ಹೇಳಿದ್ದಾರೆ. ``ನಮ್ಮ ಈ ಹಿಂದಿನ ಪ್ರತಿಭಟನೆಗಳ ಹೊರತಾಗಿಯೂ ಕೇಂದ್ರ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ,'' ಎಂದು ಅವರು ಹೇಳಿದರು.

ಬುಧವಾರ ಗುವಹಾಟಿಯಲ್ಲಿ ನಡೆದ ಪ್ರತಿಭಟನೆಯ ಭಾಗವಾಗಿ ಆಲ್ ಆಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾದಾಗ ಪೊಲಿಸರು ಅವರನ್ನು ತಡೆದರು. ಆದರೂ ಪ್ರತಿಭಟನಾಕಾರರು ಭಿತ್ತಿಪತ್ರಗಳನ್ನು ಕೈಗಳಲ್ಲಿ ಹಿಡಿದು ಪ್ರತಿಭಟಿಸಿದರು.

ತನ್ನ ಎಲ್ಲಾ ಕೇಂದ್ರಗಳಲ್ಲಿ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಯೂನಿಯನ್ ಶಾಂತಿಯುತವಾಗಿ ಪ್ರತಿಭಟಿಸಿದೆ ಎಂದು ಯೂನಿಯನ್ ಸಲಹೆಗಾರ ಸಮುಜ್ಜಲ್ ಭಟ್ಟಾಚಾಜ್ರ್ಯ ಹೇಳಿದ್ದಾರೆ. ಅಸ್ಸಾಂ ಸರಕಾರ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡುತ್ತಿಲ್ಲ ಈ ಕಾಯಿದೆ ವಾಪಸ್ ಪಡೆಯುವ ತನಕ ಹಾಗೂ ಅಕ್ರಮ ವಲಸಿಗರ ಸಮಸ್ಯೆಗೆ ಪರಿಹಾರ ದೊರೆಯುವ ತನಕ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.

2019ರಲ್ಲಿ ಅಸ್ಸಾಂನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿ  5 ಮಂದಿ ಮೃತಪಟ್ಟಿದ್ದರು. ದೇಶಾದ್ಯಂತ ಸಿಎಎ(CAA) ವಿರೋಧಿ ಹೋರಾಟದಲ್ಲಿ 28 ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: 'ಕೊರೊನಿಲ್' ಕುರಿತು ರಾಮ್‌ದೇವ್‌ಗೆ ದಿಲ್ಲಿ ಹೈಕೋರ್ಟ್‌ ತರಾಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News