ಸ್ಥಳೀಯರಲ್ಲದವರಿಗೆ ಮತದಾನ ಮಾಡಲು ಜಮ್ಮುಕಾಶ್ಮೀರದಲ್ಲಿ ಅವಕಾಶ: ವಿರೋಧ ಪಕ್ಷಗಳ ತೀವ್ರ ಆಕ್ಷೇಪ

Update: 2022-08-18 11:40 GMT

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ(Jammu Kashmir) ಮುಂದಿನ ಬಾರಿ ಚುನಾವಣೆ ನಡೆದಾಗ 25 ಲಕ್ಷ ಹೊಸ ಮತದಾರರಿರುವ  ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯರಲ್ಲದವರಿಗೂ ಮತದಾನಕ್ಕೆ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ಈ ಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ(Mehabuba Mufthi) ಮತ್ತು ಉಮರ್ ಅಬ್ದುಲ್ಲಾ(omar abdullah) ಕಟುವಾಗಿ ಟೀಕಿಸಿದ್ದಾರಲ್ಲದೆ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಇದೊಂದು ʼಅಪಾಯಕಾರಿ ಯತ್ನ' ಎಂದು ಬಣ್ಣಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರಕಾರವಿಲ್ಲದೆ ನಾಲ್ಕು ವರ್ಷಗಳೇ ಕಳೆದಿದ್ದು ಮುಂದಿನ ವರ್ಷ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯು  ಸ್ಥಳೀಯರಲ್ಲದವರಿಗೂ ಇಲ್ಲಿ ಮತದಾನಕ್ಕೆ ಅವಕಾಶ ನೀಡಲಿದೆ.  ಕೇಂದ್ರ ಸರಕಾರ 2019ರಲ್ಲಿ 370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಾಶ್ಮೀರಿಗಳಲ್ಲದವರಿಗೂ ಮತ ಚಲಾಯಿಸುವ ಹಾಗೂ ಜಮೀನು ಹೊಂದುವ ಹಕ್ಕು ದೊರಕಿದೆ.

ಚುನಾವಣೆಗಿಂತ ಮುಂಚಿತವಾಗಿ 20 ಲಕ್ಷಕ್ಕೂ ಅಧಿಕ ಹೊಸ ಮತದಾರರ ನೋಂದಣಿ ನಡೆಯುವ ನಿರೀಕ್ಷೆಯಿದೆ ಎಂದು ಜಮ್ಮು ಕಾಶ್ಮೀರ ಮುಖ್ಯ ಚುನಾವಣಾಧಿಕಾರಿ ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಇದರಿಂದಾಗಿ  ಇಲ್ಲಿನ ಮತದಾರರ ಸಂಖ್ಯೆ ಮೂರನೇ ಒಂದಂಶದಷ್ಟು  ಹೆಚ್ಚಾಗಲಿದೆ. ಸದ್ಯ ಜಮ್ಮು ಕಾಶ್ಮೀರದಲ್ಲಿ 76 ಲಕ್ಷ ಮತದಾರರಿದ್ದಾರೆ.

"ಜಮ್ಮು ಕಾಶ್ಮೀರದಲ್ಲಿ ತನಗೆ ದೊರೆಯುವ ಬೆಂಬಲದ ಬಗ್ಗೆ ಬಿಜೆಪಿಯಲ್ಲಿ ಅಭದ್ರತೆಯ ಭಾವನೆಯಿರುವುದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ,  ರಾಜ್ಯದ ನೈಜ ಮತದಾರರ ಬದಲು ತಾತ್ಕಾಲಿಕ ಮತದಾರರನ್ನು ಆಮದು ಮಾಡಿ ಚುನಾವಣೆ ಗೆಲ್ಲುವಷ್ಟು ಅಭದ್ರತೆಯ ಭಾವನೆಯನ್ನು ಬಿಜೆಪಿ ಹಿಂದಿದೆಯೇ? ಇವ್ಯಾವುವೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ" ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ, "ಚುನಾವಣೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಯತ್ನ ಇದಾಗಿದೆ, ಜಮ್ಮು ಕಾಶ್ಮೀರವನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದುಕೊಂಡು ಸ್ಥಳೀಯರ ಹಕ್ಕು ಕಸಿಯುವುದು ನಿಜವಾದ ಉದ್ದೇಶ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News