ಆತಂಕಕ್ಕೆ ಕಾರಣವಾಗಿದ್ದ ಶಸ್ತ್ರಾಸ್ತ್ರಗಳಿದ್ದ ಬೋಟ್ ಆಸ್ಟ್ರೇಲಿಯನ್ ದಂಪತಿಗೆ ಸೇರಿದ್ದು: ಫಡ್ನವೀಸ್

Update: 2022-08-18 11:53 GMT

ಮುಂಬೈ:  ಮಹಾರಾಷ್ಟ್ರದ ರಾಯಗಢದ ಹರಿಹರೇಶ್ವರ್ ಬೀಚ್(Harihareshwar Beach) ಸಮೀಪ ಇಂದು ಶಸ್ತ್ರಾಸ್ತ್ರಗಳೊಂದಿಗೆ ಪತ್ತೆಯಾದ ಹಾನಿಗೀಡಾದ ಬೋಟ್ ಒಂದು ಆಸ್ಟ್ರೇಲಿಯಾದ ಒಂದು ದಂಪತಿಗೆ ಸೇರಿದ್ದು, ಬೋಟಿನಲ್ಲಿ ಇಂಜಿನ್ ದೋಷ ಕಾಣಿಸಿಕೊಂಡ ನಂತರ ಅವರು ಬೋಟನ್ನು ಕೈಬಿಟ್ಟಿದ್ದರು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ತಿಳಿಸಿದ್ದಾರೆ.

ಮೂರು ಎಕೆ-47 ರೈಫಲ್‍ಗಳು, ಗುಂಡುಗಳು ಮತ್ತು ಕೆಲ ದಾಖಲೆಗಳಿದ್ದ ಈ ಬೋಟನ್ನು ಇಂದು ಮೀನುಗಾರರು ಪತ್ತೆಹಚ್ಚಿದ ನಂತರ ಕೆಲ ಕಾಲ ಸ್ಥಳದಲ್ಲಿ ಆತಂಕ ನೆಲೆಯೂರಿತ್ತು.

ಸದ್ಯ ಇದೊಂದು ಉಗ್ರ ಕೃತ್ಯವೆಂದು ತಿಳಿದು ಬಂದಿಲ್ಲ, ತನಿಖೆ ಮುಂದುವರಿದಿದೆ. ಬೋಟಿನಲ್ಲಿ ಶಸ್ತ್ರಾಸ್ತ್ರಗಳನ್ನು ಏಕೆ ಇರಿಸಲಾಗಿತ್ತು ಎಂಬ ಕುರಿತು ಕೂಡ ಈಗ ಏನೂ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸ್ಥಳೀಯ ಪೊಲೀಸರು ಮತ್ತು ಉಗ್ರ ನಿಗ್ರಹ ಪಡೆ ತನಿಖೆ ನಡೆಸುತ್ತಿದೆ.

 ಲೇಡ್ ಹಾನ್ ಎಂಬ ಹೆಸರಿನ ಈ ಬೋಟ್ ಆಸ್ಟ್ರೇಲಿಯಾದ ಹಾನ ಲಾಂಡರ್ಗನ್ ಎಂಬ ಮಹಿಳೆಗೆ ಸೇರಿದ್ದು ಆಕೆಯ ಪತಿ ಜೇಮ್ಸ್ ಹಾರ್ಬರ್ಟ್ ಇದರ ಕ್ಯಾಪ್ಟನ್ ಆಗಿದ್ದಾರೆಂದು ತಿಳಿದು ಬಂದಿದೆ. ಈ 16 ಮೀಟರ್  ಉದ್ದದ ಬೋಡ್ ಮಸ್ಕತ್ ಮೂಲಕ ಯುರೋಪ್‍ಗೆ (Europe) ತೆರಳುತ್ತಿತ್ತು ಆದರೆ ಜೂನ್ 26 ರಂದು ಇಂಜಿನ್ ದೋಷ ಕಾಣಿಸಿಕೊಂಡ ನಂತರ ಅದರಲ್ಲಿದ್ದವರನ್ನು ರಕ್ಷಿಸಲಾಗಿತ್ತು. ಆದರೆ ಬೋಟ್ ಅನ್ನು ದಡಕ್ಕೆ ಸಾಗಿಸಲು ಸಾಧ್ಯವಾಗದೇ ಇದ್ದುದರಿಂದ ಅದನ್ನು ಸಮುದ್ರ ಮಧ್ಯದಲ್ಲಿಯೇ ಬಿಟ್ಟುಬಿಡಲಾಗಿತ್ತು ಎಂದು ಫಡ್ನವೀಸ್ ತಿಳಿಸಿದ್ದಾರೆ.

ಈ ಬೋಟ್ ಪತ್ತೆಯಾದ ಬೆನ್ನಲ್ಲೇ ರಾಯಗಢದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News