ವಿಶ್ವಸಂಸ್ಥೆ: ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಸರಣಿ ಕಾರ್ಯಕ್ರಮ

Update: 2022-08-18 15:51 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಆ.18: ವಿಶ್ವದಾದ್ಯಂತ ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಲೈಂಗಿಕ ದೌರ್ಜನ್ಯದಲ್ಲಿ ಬದುಕುಳಿದ 1.3 ಶತಕೋಟಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಉದ್ದೇಶದ ಸರಣಿ ಪ್ರದರ್ಶನ ಕಾರ್ಯಕ್ರಮವನ್ನು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ‘ರೈಸ್ ’ ಮತ್ತು ‘ಸ್ಪಾಟ್ಲೈಟ್ ಇನೀಷಿಯೇಟಿವ್’ನ ಸಹಯೋಗದೊಂದಿಗೆ ‘ನೀವು ಏನು ಧರಿಸಿದ್ದೀರಿ’ ಎಂಬ ಹೆಸರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅತ್ಯಾಚಾರ ಸಂತ್ರಸ್ತರು ತಮ್ಮ ಮೇಲೆ ದಾಳಿ ನಡೆದಾಗ ಧರಿಸಿದ್ದ ಸುಮಾರು 103 ವಿವಿಧ ರೀತಿಯ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ‌

ನ್ಯೂಯಾರ್ಕ್ ನ ವಿಶ್ವಸಂಸ್ಥೆ ವೀಕ್ಷಕರ ಕೇಂದ್ರದಲ್ಲಿ ಜುಲೈ 11ರಂದು ಉದ್ಘಾಟನೆಗೊಂಡ ಪ್ರದರ್ಶನ ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಪ್ರದರ್ಶನವು ಉದ್ಯಮಿ ಮತ್ತು ಕಾರ್ಯಕರ್ತೆ ಪ್ಯಾರಿಸ್ ಹಿಲ್ಟನ್ರಂತಹ ಬದುಕುಳಿದವರ ಕೊಡುಗೆಗಳನ್ನು ಒಳಗೊಂಡಿದೆ ಮತ್ತು ಲೈಂಗಿಕ ಆಕ್ರಮಣದ ಆಪಾದನೆಯನ್ನು ಸೂಕ್ತ ವ್ಯಕ್ತಿಗಳ ಅಂದರೆ ಅಪರಾಧಿಗಳ ಮೇಲೆ ವರ್ಗಾಯಿಸುವ ಬಗ್ಗೆ ಕೇಂದ್ರೀಕೃತವಾಗಿದೆ. ಪ್ರಪಂಚದಾದ್ಯಂತ ಸಂತ್ರಸ್ತರ ಮುಂದೆ ಇಡುವ ಹಲವು ಆಕ್ಷೇಪಾರ್ಹ ಪ್ರಶ್ನೆಗಳಲ್ಲಿ ಒಂದಾದ ‘ಆಗ ನೀವೇನು ಧರಿಸಿದ್ದೀರಿ’ ಎಂಬ ಪದವನ್ನು (ಅವರ ವಿರುದ್ಧ ನಡೆದ ಅಪರಾಧಕ್ಕೆ ಅವರನ್ನೇ ಹೊಣೆಯಾಗಿಸುವ ಪ್ರಶ್ನೆ) ಈ ಕಾರ್ಯಕ್ರಮಕ್ಕೆ ಇಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ‘ ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯವನ್ನು ತೊಡೆದುಹಾಕುವಲ್ಲಿನ ನಮ್ಮ ಸಾಮೂಹಿಕ ಜವಾಬ್ದಾರಿಯ ಚರ್ಚೆಯನ್ನು ಉತ್ತೇಜಿಸಲು ಇದು ವೇಗವರ್ಧಕವಾಗಬೇಕು ಎಂದರು. ಇಂದು ಬದುಕುಳಿದವರಲ್ಲಿ ಐವರು ತಮ್ಮ ಕತೆಯನ್ನು ಜಗತ್ತಿಗೆ ಹೇಳಲು ವಿಶ್ವಸಂಸ್ಥೆಯ ವೇದಿಕೆಯ ಮೂಲಕ ಅನಾಮಧೇಯತೆಯಿಂದ ಹೊರಬಂದಿದ್ದಾರೆ. ಈ ಐವರಲ್ಲಿ ನಾನೂ ಒಬ್ಬಳು. ನನ್ನ ಕತೆ ನನ್ನದೊಬ್ಬಳದೇ ಅಲ್ಲ’ ಎಂದು ‘ರೈಸ್’ ಸಂಘಟನೆಯ ಸಿಇಒ ಮತ್ತು ಸ್ಥಾಪಕಿ ಅಮಂಡಾ ನ್ಯೂಯೆನ್ ಹೇಳಿದರು. ವಿಶ್ವದಾದ್ಯಂತ 35% ಮಹಿಳೆಯರು ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News