ಚೀನಾವು ತೈವಾನ್ ಮೇಲಿನ ಮಿಲಿಟರಿ, ಆರ್ಥಿಕ ‘ಬಲಾತ್ಕಾರ’ ಹೆಚ್ಚಿಸಲಿದೆ: ಅಮೆರಿಕ

Update: 2022-08-18 15:53 GMT

ತೈಪೆ, ಆ.18: ತೈವಾನ್ ಮೇಲಿನ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಬಲಾತ್ಕಾರವನ್ನು ಚೀನಾ ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ ಎಂದು ಅಮೆರಿಕದ ಪೂರ್ವ ಏಶ್ಯಾಕ್ಕೆ ಅಮೆರಿಕದ ಉನ್ನತ ರಾಯಭಾರಿ ಡೇನಿಯಲ್ ಕ್ರಿಟೆನ್ಬ್ರಿಂಕ್ ಹೇಳಿದ್ದಾರೆ. ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ಗೆ ಅಮೆರಿಕ ಸಂಸತ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಅಮೆರಿಕದ ಸಂಸತ್ ಸದಸ್ಯರ ನಿಯೋಗ ನೀಡಿದ್ದ ಎರಡು ಪ್ರತ್ಯೇಕ ಭೇಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ತೈವಾನ್ ಸುತ್ತಮುತ್ತ ಬೃಹತ್ ಸೇನಾ ಸಮರಾಭ್ಯಾಸ ನಡೆಸಿತ್ತು.

ತೈವಾನ್ ತನ್ನ ಭೂಪ್ರದೇಶದ ವ್ಯಾಪ್ತಿಯಲ್ಲಿದೆ ಎಂಬುದು ಚೀನಾದ ಪ್ರತಿಪಾದನೆಯಾಗಿದೆ. ಈ ಮಧ್ಯೆ, ಚೀನಾದ ಸಮರಾಭ್ಯಾಸಕ್ಕೆ ಪ್ರತಿಯಾಗಿ ತೈವಾನ್ಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಆ ದೇಶದೊಂದಿಗೆ ಶರತ್ಕಾಲದ ಅಂತ್ಯದೊಳಗೆ ಅಧಿಕೃತ ವ್ಯಾಪಾರ ಮಾತುಕತೆ ನಡೆಸುವ ಯೋಜನೆಯಿದೆ ಎಂದು ಅಮೆರಿಕ ಗುರುವಾರ ಘೋಷಿಸಿದೆ. ‘ಚೀನಾ ಮತ್ತು ತೈವಾನ್ ಕುರಿತ ನಮ್ಮ ಕಾರ್ಯನೀತಿ ಬದಲಾಗಿಲ್ಲ. 

ಬದಲಾಗಿರುವುದೆಂದರೆ ಚೀನಾದ ಹೆಚ್ಚುತ್ತಿರುವ ಬಲಾತ್ಕಾರದ ವರ್ತನೆ. ಈ ಕ್ರಮಗಳು ತೈವಾನ್ ಅನ್ನು ಬೆದರಿಸಲು, ಬಲವಂತ ಪಡಿಸಲು ಮತ್ತು ಅದರ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸಲು ನಡೆಸುವ ತೀವ್ರ ಒತ್ತಡದ ಅಭಿಯಾನದ ಭಾಗವಾಗಿದೆ. ಈ ಒತ್ತಡದ ಅಭಿಯಾನ ಮುಂದಿನ ದಿನಗಳಲ್ಲೂ ಮುಂದುವರಿಯುವ ನಿರೀಕ್ಷೆಯಿದೆ ’ ಎಂದು ಟೆಲಿಕಾನ್ಫರೆನ್ಸ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಕ್ರಿಟೆನ್ಬ್ರಿಂಕ್ ಹೇಳಿದ್ದಾರೆ.

ತೈವಾನ್ ಅನ್ನು ಸಾರ್ವಭೌಮ ದೇಶ ಎಂದು ಮಾನ್ಯ ಮಾಡುವ ಯಾವುದೇ ರಾಜತಾಂತ್ರಿಕ ಕ್ರಮವನ್ನು ಚೀನಾ ವಿರೋಧಿಸುತ್ತದೆ ಮತ್ತು ತೈವಾನ್ನ ಅರ್ಥವ್ಯವಸ್ಥೆಯ ಮೇಲೆ ಸಾಂಕೇತಿಕ ನಿರ್ಬಂಧ ವಿಧಿಸಿದೆ. ಚೀನಾದ ಮಾತು ಹಾಗೂ ವರ್ತನೆ ಅಸ್ಥಿರಗೊಳಿಸುವ ಉಪಕ್ರಮವಾಗಿದೆ ಮತ್ತು ಅವರ ತಪ್ಪು ಲೆಕ್ಕಾಚಾರವು ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಕ್ರಿಟೆನ್ಬ್ರಿಂಕ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News