ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಶಿಕ್ಷೆ ಮಾಫಿ ಹಿಂದೆಗೆತಕ್ಕೆ ಸಾಮಾಜಿಕ ಕಾರ್ಯಕರ್ತರ ಆಗ್ರಹ

Update: 2022-08-19 06:29 GMT

ಹೊಸದಿಲ್ಲಿ,ಆ.18: 2002ರ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಜೈಲು ಸೇರಿದ್ದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ ಅವರನ್ನು ಬಿಡುಗಡೆಗೊಳಿಸಿರುವ ನಿರ್ಧಾರವನ್ನು ರದ್ದುಗೊಳಿಸುವಂತೆ ತಳಮಟ್ಟದ ಕಾರ್ಯಕರ್ತರು,ಮಹಿಳೆಯರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ 6,000ಕ್ಕೂ ಅಧಿಕ ನಾಗರಿಕರು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಮತ್ತು ಸಮೂಹ ಹತ್ಯೆಗಳ ಅಪರಾಧಿಗಳಿಗೆ ಕ್ಷಮಾದಾನ ನೀಡಿರುವುದು ‘ವ್ಯವಸ್ಥೆಯಲ್ಲಿ ನಂಬಿಕೆಯಿಡಿ,ನ್ಯಾಯವನ್ನು ಕೋರಿ ಮತ್ತು ವಿಶ್ವಾಸವಿಡಿ’ ಎಂದು ಬೋಧಿಸಲಾಗಿರುವ ಪ್ರತಿ ಅತ್ಯಾಚಾರದ ಬಲಿಪಶುವಿನ ಮೇಲೆ ಕ್ರೂರ ಪರಿಣಾಮವನ್ನು ಬೀರುತ್ತದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾನವ ಹಕ್ಕು ಕಾರ್ಯಕರ್ತರಾದ ಸೈದಾ ಹಮೀದ್,ಝಫರುಲ್ ಇಸ್ಲಾಮ್ ಖಾನ್,ರೂಪರೇಖಾ,ದೇವಕಿ ಜೈನ್,ಉಮಾ ಚಕ್ರವರ್ತಿ, ಸುಭಾಷಿಣಿ ಅಲಿ,ಕವಿತಾ ಕೃಷ್ಣನ್,ಮೈಮೂನಾ ಮುಲ್ಲಾ,ರಚನಾ ಮುದ್ರಾಬೋಯಿನಾ,ಶಬನಮ್ ಹಾಶ್ಮಿ ಮತ್ತಿತರರು ಈ ಜಂಟಿ ಹೇಳಿಕೆಯನ್ನು ಹೊರಡಿಸಿದ್ದಾರೆ.

ಸಹೇಲಿ ವಿಮೆನ್ಸ್ ರಿಸೋರ್ಸ್ ಸೆಂಟರ್,ಆಲ್ ಇಂಡಿಯಾ ಪ್ರೊಗ್ರೆಸಿವ್ ವಿಮೆನ್ಸ್ ಅಸೋಸಿಯೇಷನ್,ಉತ್ತರಾಖಂಡ ಮಹಿಳಾ ಮಂಚ್, ಪ್ರಗತಿಶೀಲ ಮಹಿಳಾ ಮಂಚ್ ಮುಂತಾದ ನಾಗರಿಕ ಹಕ್ಕು ಗುಂಪುಗಳು ಹೇಳಿಕೆಗೆ ಸಹಿ ಹಾಕಿವೆ.

ಅಪರಾಧಿಗಳಿಗೆ ಕ್ಷಮಾದಾನವನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿರುವ ನಾಗರಿಕರು ಈ ಹಂತಕರು ಮತ್ತು ಅತ್ಯಾಚಾರಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿರುವುದು ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧ ಹಿಂಸೆಯ ಇತರ ಕೃತ್ಯಗಳನ್ನು ಎಸಗುವ ಪುರುಷರ ನಿರ್ಭಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆಯಷ್ಟೇ ಎಂದು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News