×
Ad

ಡೋಲೊ ಶಿಫಾರಸಿಗೆ ವೈದ್ಯರಿಗೆ 1,000 ಕೋಟಿ ರೂ. ಉಚಿತ ಕೊಡುಗೆ

Update: 2022-08-18 23:13 IST

ಹೊಸದಿಲ್ಲಿ, ಆ. 18: ಪ್ಯಾರಸಿಟಮಾಲ್ ಮಾತ್ರೆ ಡೋಲೊವನ್ನು ಶಿಫಾರಸು ಮಾಡಲು ವೈದ್ಯರಿಗೆ ಉಚಿತ ಕೊಡುಗೆ ನೀಡಲು ಡೋಲೊ ಕಂಪೆನಿ 1,000 ಕೋ. ರೂ. ವೆಚ್ಚ ಮಾಡಿದೆ ಎಂದು ವೈದ್ಯಕೀಯ ಪ್ರತಿನಿಧಿಗಳ ಸಂಘಟನೆ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಫೆಡರೇಶನ್ ಆಫ್ ಮೆಡಿಕಲ್ ಆ್ಯಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂಜಯ್ ಪಾರಿಖ್, ಡೋಲೊ ಕಂಪೆನಿ 1,000 ಕೋ. ರೂ. ಮೌಲ್ಯದ ಉಚಿತ ಕೊಡುಗೆಯನ್ನು ವೈದ್ಯರಿಗೆ  ನೀಡಿದೆ. ತನ್ನ ಮಾಹಿತಿಗೆ ಮೂಲವಾಗಿ ಅವರು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ವರದಿಯನ್ನು ಉಲ್ಲೇಖಿಸಿದರು. 

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಹಾಗೂ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ, ‘‘ನೀವು ಹೇಳುತ್ತಿರುವುದು ನನ್ನ ಕಿವಿಗಳಿಗೆ ಸಂಗೀತವಲ್ಲ. ನನಗೆ ಕೋವಿಡ್ ಸೋಂಕು ತಗಲಿದಾಗ ಇದೇ ಔಷಧವನ್ನು ಸೇವಿಸಿದ್ದೇನೆ’’ ಎಂದರು. 

ಫೆಡರೇಶನ್ ಆಫ್ ಮೆಡಿಕಲ್ ಆ್ಯಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ತನ್ನ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಔಷಧ ಸೂತ್ರೀಕರಣ ಹಾಗೂ ಭಾರತದಲ್ಲಿ ಮಾರಾಟವಾಗುತ್ತಿರುವ ಔಷಧಗಳ ಬೆಲೆಗಳ ಕುರಿತು ಕಳವಳ ವ್ಯಕ್ತಪಡಿಸಿತು. 

ಸಂಜಯ್ ಪಾರಿಖ್ ಅವರ ಪ್ರತಿಪಾದನೆಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ಇದು ಗಂಭೀರ ವಿಚಾರ ಎಂದು ಅಭಿಪ್ರಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News