ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ; ನಿಮಗೆ ನಾಚಿಕೆಯಾಗುವುದಿಲ್ಲವೇ ?: ಪ್ರಧಾನಿಗೆ ರಾಹುಲ್ ಗಾಂಧಿ ತರಾಟೆ

Update: 2022-08-18 18:10 GMT

ಹೊಸದಿಲ್ಲಿ, ಆ. 18: ಬಿಜೆಪಿ ಅಪರಾಧಿಗಳನ್ನು ಬೆಂಬಲಿಸುತ್ತಿರುವುದು ಮಹಿಳೆಯರ ಕುರಿತು ಅದರ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂತಹ ರಾಜಕಾರಣ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. 

ಉತ್ತರಪ್ರದೇಶದ ಉನ್ನಾವೊ ಹಾಗೂ ಹಾಥರಸ್, ಜಮ್ಮು ಹಾಗೂ ಕಾಶ್ಮೀರದ ಕಥುವಾದ ಅತ್ಯಾಚಾರ ಪ್ರಕರಣಗಳು ಹಾಗೂ ಈಗ ಗುಜರಾತ್‌ನಲ್ಲಿ ಸರಕಾರ ಬಿಲ್ಕಿಸ್ ಬಾನು ಸಾಮಾಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಕರಣವನ್ನು ಉಲ್ಲೇಖಿಸಿದ ಅವರು ಬಿಜೆಪಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಉನ್ನಾವೊ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ರಕ್ಷಣೆ ಕೆಲಸ ಮಾಡಲಾಯಿತು. ಕಥುವಾ ಪ್ರಕರಣದಲ್ಲಿ ಅತ್ಯಾಚಾರಿಗಳ ಪರವಾಗಿ ಅಭಿಯಾನ ನಡೆಯಿತು. ಹಾಥರಸ್ ಪ್ರಕರಣದಲ್ಲಿ ಸರಕಾರ ಅತ್ಯಾಚಾರಿಗಳ ಪರವಾಗಿ ನಿಂತಿತು. ಈಗ ಗುಜರಾತ್ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಗೌರವ ನೀಡಿತು. ಅಪರಾಧಿಗಳಿಗೆ ಬೆಂಬಲ ನೀಡುವುದು ಮಹಿಳೆಯರ ಕುರಿತು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. 

‘‘ಪ್ರಧಾನಿ ಮೋದಿ ಅವರೇ, ಇಂತಹ ರಾಜಕಾರಣ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ಅಪರಾಧಿಗಳನ್ನು ಬಿಡುಗಡೆಗೆ ಅನುಮೋದನೆ ನೀಡಿದ್ದ ಪರಿಶೀಲನಾ ಸಮಿತಿಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಇದ್ದರು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News