ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಸೇನೆಯ ಅಧಿಕಾರಿ

Update: 2022-08-19 01:49 GMT
ನಿರ್ಮಲ್ ಶಿವರಂಜನ್ 

ಭೋಪಾಲ್: ಸ್ವಾತಂತ್ರ್ಯ ದಿನದಂದು ಜಬಲ್ಪುರದಿಂದ ಪಚಮಡಿಗೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಸೇನೆಯ ಯುವ ಅಧಿಕಾರಿ ಕ್ಯಾಪ್ಟನ್ ನಿರ್ಮಲ್ ಶಿವರಂಜನ್ ಎಂಬವರು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವುದು ದೃಢಪಟ್ಟಿದೆ.

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಅವರ ಮೃತದೇಹ ಬೆಟ್ಟದ ತಪ್ಪಲಿನ ಬಬೈ ಪ್ರದೇಶದ ನದಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಅಧಿಕಾರಿ ನಾಪತ್ತೆಯಾಗಿದ್ದ ದಿನ ಈ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿತ್ತು ಹಾಗೂ ಹಳ್ಳ- ಕೊಳಗಳು ಸಾಮಾನ್ಯ ಮಟ್ಟಕ್ಕಿಂತ 10-15 ಅಡಿ ಎತ್ತರದಲ್ಲಿ ಹರಿಯುತ್ತಿದ್ದವು ಎಂದು ಮೂಲಗಳು ಹೇಳಿವೆ. ಈ ದಿಢೀರ್ ಪ್ರವಾಹದ ನೀರಿನಲ್ಲಿ ಅಧಿಕಾರಿ ಕೊಚ್ಚಿಕೊಂಡು ಹೋಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅವರು ಜಬಲ್ಪುರದಲ್ಲಿ ಸೇನಾ ಲೆಫ್ಟಿನೆಂಟ್ ಆಗಿದ್ದ ಪತ್ನಿಯನ್ನು ಭೇಟಿ ಮಾಡಲು ತೆರಳಿದ್ದರು.

ಅಧಿಕಾರಿಯ ವಾಹನದ ಕಿಟಕಿ ಜಜ್ಜಿಕೊಂಡಿರುವುದು ಕಂಡುಬಂದಿದ್ದು, ಕಿಟಕಿಯನ್ನು ಒಡೆದು ಹೊರಬಂದು ನದಿಯನ್ನು ಈಜಿಕೊಂಡು ದಡ ಸೇರಲು ಅವರು ಪ್ರಯತ್ನಿಸಿದ್ದರು ಎನ್ನುವುದು ಇದರಿಂದ ತಿಳಿದು ಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

32 ವರ್ಷ ವಯಸ್ಸಿನ ಸೇನಾ ಶಿಕ್ಷಣ ಪಡೆ (ಎಇಸಿ) ಅಧಿಕಾರಿಯಾಗಿದ್ದು, ಅವರು ಮೂಲತಃ ಕೇರಳದ ಎರ್ನಾಕುಲಂ ಜಿಲ್ಲೆಯವರು. ರಾಜಸ್ಥಾನದ ಸೂರತ್‍ಗಢದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಇವರು ಪಚಮಡಿಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದರು.

ಕ್ಯಾಪ್ಟನ್ ಶಿವರಂಜನ್ ಅವರು ಪಚಮಡಿಯಿಂದ ಜಬಲ್ಪುರಕ್ಕೆ ಆಗಸ್ಟ್ 13ರಂದು ಪತ್ನಿ, ಲೆಫ್ಟಿನೆಂಟ್ ಗೋಪಿಚಂದ ಅವರನ್ನ ಭೇಟಿ ಮಾಡುವ ಸಲುವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದರು. ಆಗಸ್ಟ್ 16ರಂದು ಮುಂಜಾನೆ 6 ಗಂಟೆಗೆ ಕರ್ತವ್ಯಕ್ಕೆ ಮರಳಬೇಕಿತ್ತು. ಅವರು ಕರ್ತವ್ಯಕ್ಕೆ ಮರಳದೇ ಇದ್ದಾಗ, ಹಿರಿಯ ಅಧಿಕಾರಿಗಳು ಅವರ ಪತ್ನಿಯನ್ನು ಸಂಪರ್ಕಿಸಿದ್ದರು. ಶಿವರಂಜನ್ ಆಗಸ್ಟ್ 15ರಂದು ಸಂಜೆ 3.30ಕ್ಕೆ ಪಚಮಡಿಯಿಂದ ತೆರಳಿರುವುದಾಗಿ ಅವರು ಮಾಹಿತಿ ನೀಡಿದ್ದರು.

ಸ್ವಾತಂತ್ರ್ಯ ದಿನದಂದು ರಾತ್ರಿ 8.30ಕ್ಕೆ ಕೊನೆಯದಾಗಿ ದಂಪತಿ ದೂರವಾಣಿ ಮೂಲಕ ಮಾತನಾಡಿದ್ದರು. ಪ್ರವಾಹ ನೀರಿನಿಂದಾಗಿ ಮುಖ್ಯರಸ್ತೆ ಸಂಪರ್ಕ ಕಡಿದು ಹೋಗಿರುವುದಾಗಿ ಮತ್ತು ಬೇರೆ ದಾರಿಯ ಮೂಲಕ ಹೋಗುತ್ತಿರುವುದಾಗಿ ಶಿವರಂಜನ್ ತಿಳಿಸಿದ್ದರು. ಅದೇ ವೇಳೆ ತಾಯಿ ಜತೆಗೂ ಅವರು ಮಾತನಾಡಿದ್ದರು. ಒಂದು ಗಂಟೆ ಬಳಿಕ ಅವರ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ತಿಳಿದುಬಂದಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News