ಮಕ್ಕಳ ಟಿಕೆಟ್ ಬುಕ್ಕಿಂಗ್‍ನಲ್ಲಿ ಬದಲಾವಣೆ ಇಲ್ಲ : ರೈಲ್ವೆ ಸ್ಪಷ್ಟನೆ

Update: 2022-08-19 02:43 GMT

ಹೊಸದಿಲ್ಲಿ: ರೈಲಿನಲ್ಲಿ ಪ್ರಯಾಣ ಮಾಡಲು ಮಕ್ಕಳಿಗೆ ಟಿಕೆಟ್ ಬುಕ್ಕಿಂಗ್ ಮಾಡುವ ಸಂಬಂಧ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಒಂದರಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ವಯಸ್ಕರ ಶುಲ್ಕವನ್ನೇ ವಿಧಿಸಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರೈಲ್ವೆ ಈ ಸ್ಪಷ್ಟನೆ ನೀಡಿದೆ ಎಂದು business-standard.com ವರದಿ ಮಾಡಿದೆ.

ರೈಲ್ವೆ ಸಚಿವಾಲಯ 2020ರ ಮಾ. 6ರಂದು ನೀಡಿರುವ ಸುತ್ತೋಲೆಯ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಅಂಥ ಪ್ರಕರಣಗಳಲ್ಲಿ ಪ್ರತ್ಯೇಕ ಬರ್ತ್ ಅಥವಾ ಆಸನ ವ್ಯವಸ್ಥೆ ಒದಗಿಸಲಾಗುವುದಿಲ್ಲ ಎಂದು ಹೇಳಿತ್ತು.

ಆದಾಗ್ಯೂ ಐದು ವರ್ಷದ ವಯಸ್ಸಿನ ಒಳಗಿನ ಮಕ್ಕಳಿಗೆ ಪ್ರತ್ಯೇಕ ಆಸನ ಅಥವಾ ಬರ್ತ್ ಬೇಕಾದಲ್ಲಿ ಪ್ರಯಾಣಿಕರು ಟಿಕೆಟ್ ಖರೀದಿಸಬಹುದು ಅಂಥ ಸಂದರ್ಭಗಳಲ್ಲಿ ವಯಸ್ಕರ ಶುಲ್ಕವನ್ನೇ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿತ್ತು.

"ಮಕ್ಕಳ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ನಿಯಮಗಳನ್ನು ಬದಲಿಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿಸಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಈ ವರದಿಗಳು ತಪ್ಪುದಾರಿಗೆ ಎಳೆಯುವಂಥವು. ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News