×
Ad

ಹುಡುಗಿಯರು ಪ್ರಿಯಕರನನ್ನು ಬದಲಿಸಿದಂತೆ ನಿತೀಶ್ ಮೈತ್ರಿ ಬದಲಿಸುತ್ತಾರೆ ಎಂದ ಬಿಜೆಪಿ ಮುಖಂಡ ಕೈಲಾಶ್ ವಿಜಯ್‍ವರ್ಗೀಯ!

Update: 2022-08-19 08:20 IST
ಕೈಲಾಶ್ ವಿಜಯ್‍ವರ್ಗೀಯ

ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ಹಾಗೂ ಸಂಯುಕ್ತ ಜನತಾದಳ ಮುಖಂಡ ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿಯನ್ನು ದಿಢೀರನೇ ಮುರಿದುಕೊಂಡ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯ್‍ವರ್ಗೀಯ, "ನಾನು ವಿದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯರು ಅಲ್ಲಿ ತಮ್ಮ ಪ್ರಿಯಕರನನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸುತ್ತಾರೆ ಎಂದು ಕೆಲವರು ಹೇಳಿದರು. ಬಿಹಾರದ ಮುಖ್ಯಮಂತ್ರಿ ಕೂಡಾ ಹಾಗೆಯೇ. ಯಾರ ಕೈಯನ್ನು ಅವರು ಹಿಡಿಯುತ್ತಾರೆ ಅಥವಾ ಯಾರಿಗೆ ಕೈ ಕೊಡುತ್ತಾರೆ ಎನ್ನುವುದು ತಿಳಿಯುವುದಿಲ್ಲ" ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು ಇಂಧೋರ್‌ ನಲ್ಲಿ ಗುರುವಾರ ಪ್ರತಿಕ್ರಿಯಿಸಿದರು.

ಪಕ್ಷದ ಕಚೇರಿಗೆ ಅಗ್ನಿವೀರರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುವುದಾಗಿ ಆಫರ್ ನೀಡುವ ಮೂಲಕ ಕಳೆದ ಜೂನ್‍ನಲ್ಲಿ ವಿಜಯ್‍ವರ್ಗೀಯ ವಿವಾದಕ್ಕೆ ಸಿಲುಕಿಕೊಂಡಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಟೂಲ್‍ಕಿಟ್ ಗ್ಯಾಂಗ್ ತಿರುಚಿದೆ ಎಂದು ಸಮುಜಾಯಿಷಿ ನೀಡಿದ್ದರು.

ಕಳೆದ ವಾರ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿದ್ದ ನಿತೀಶ್, ಈ ನಡೆ ತೀರಾ ಅನಿರೀಕ್ಷಿತವೇನೂ ಅಲ್ಲ; ಅದನ್ನು ತಡೆಯಲು ನಾವು ಮುಂದಾಗಿಲ್ಲ ಎಂದು ಆರಂಭದಲ್ಲಿ ಹೇಳಿತ್ತು. ಆದರೆ ಪಕ್ಷದ ಮುಖ್ಯ ತಂತ್ರಗಾರ ಅಮಿತ್ ಶಾ, ನಿತೀಶ್ ಜತೆ ಮಾತನಾಡಿ ಮೈತ್ರಿ ಉಳಿಸಲು ಮುಂದಾಗಿದ್ದರು ಎಂದು ಬಳಿಕ ಮಾಜಿ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಒಪ್ಪಿಕೊಂಡಿದ್ದರು.

ಮೈತ್ರಿ ಕಡಿದುಕೊಳ್ಳುವ ಎರಡು ದಿನ ಮೊದಲು ಕೂಡಾ, ಆತಂಕಪಡುವ ಅಗತ್ಯ ಇಲ್ಲ ಎಂದು ನಿತೀಶ್ ಕುಮಾರ್, ಅಮಿತ್ ಶಾ ವರಿಗೆ ಭರವಸೆ ನೀಡಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದರು. ನಿತೀಶ್ ಕುಮಾರ್ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಕ್ಷ ಹೇಳಿತ್ತು ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News