ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ದಾಳಿ

Update: 2022-08-19 05:06 GMT
Photo:PTI

ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi Deputy Chief Minister Manish Sisodia) ಅವರ ದಿಲ್ಲಿ ನಿವಾಸ ಸೇರಿದಂತೆ ದೇಶದಾದ್ಯಂತ ಒಟ್ಟು 21 ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) Central Bureau of Investigation (CBI) ಶುಕ್ರವಾರ ಬೆಳಗ್ಗೆ  ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.

ದಿಲ್ಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ತನಿಖಾ ಸಂಸ್ಥೆ ಮನೀಶ್ ಸಿಸೋಡಿಯಾ ಅವರ ಮನೆಯಲ್ಲಿ ಶೋಧ ನಡೆಸುತ್ತಿದೆ. ದಿಲ್ಲಿ ಸರಕಾರದ  ಮೂವರು ಅಧಿಕಾರಿಗಳ ನಿವಾಸಗಳನ್ನೂ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

"ಸಿಬಿಐ ಇಲ್ಲಿ ನನ್ನ ನಿವಾಸದಲ್ಲಿದೆ. ನಾನು ತನಿಖಾ ಸಂಸ್ಥೆಗೆ ಸಹಕರಿಸುತ್ತೇನೆ, ಸಿಬಿಐಗೆ ನನ್ನ ವಿರುದ್ಧ ಯಾವ ದಾಖಲೆಯೂ ಸಿಗಲಾರದು " ಎಂದು ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ  ಸಿಸೋಡಿಯಾ ಅವರು "ಆರೋಗ್ಯ ಹಾಗೂ  ಶಿಕ್ಷಣ ಕ್ಷೇತ್ರದಲ್ಲಿ ದಿಲ್ಲಿ ಸರಕಾರ  ಮಾಡಿದ ಅತ್ಯುತ್ತಮ ಕೆಲಸಗಳಿಂದಾಗಿ ಈ ಜನರು ತೊಂದರೆಗೀಡಾಗಿದ್ದಾರೆ ಹಾಗೂ  ಅದಕ್ಕಾಗಿಯೇ ಎರಡೂ ಇಲಾಖೆಗಳ ಮಂತ್ರಿಗಳನ್ನು ಗುರಿಯಾಗಿಸಲಾಗಿದೆ. ನ್ಯಾಯಾಲಯದಲ್ಲಿ ಸತ್ಯ ಹೊರಬರಲಿದೆ'' ಎಂದರು.

ಈ ಹಿಂದಿನ ಶೋಧಕಾರ್ಯದ ವೇಳೆ ತನಿಖಾ ಸಂಸ್ಥೆ ಅಧಿಕಾರಿಗಳಿಗೆ  ತಮ್ಮ ಸರಕಾರದ ವಿರುದ್ಧ  ಏನೇನೂ ಸಿಕ್ಕಿರಲಿಲ್ಲ ಹಾಗೂ  ಈ ಬಾರಿ  ಏನೂ ಹೊರಬರುವುದಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ  ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ತಂದ ದಿಲ್ಲಿ ಅಬಕಾರಿ ನೀತಿಯ ರಚನೆ ಹಾಗೂ  ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಿದೆ.

  ದಿಲ್ಲಿ  ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದಿಲ್ಲಿ ಸರಕಾರದ  ಅಬಕಾರಿ ನೀತಿಯ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News