×
Ad

ಮಹಾರಾಷ್ಟ್ರ: 'ದಹಿ ಹಂಡಿ' ಉತ್ಸವ ಆಯೋಜನೆಯಲ್ಲೂ ಶಿವಸೇನಾ ಬಣಗಳ ನಡುವೆ ಪೈಪೋಟಿ

Update: 2022-08-19 10:24 IST

ಮುಂಬೈ: ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲು ಪ್ರತಿ ವರ್ಷ ಜನ್ಮಾಷ್ಟಮಿಯಂದು ಮಹಾರಾಷ್ಟ್ರದಲ್ಲಿ ಆಯೋಜಿಸಲಾಗುವ  'ದಹಿ ಹಂಡಿ' ಉತ್ಸವವು ಈ ಬಾರಿ ಶಿವಸೇನೆಯ ಎರಡು ಬಣಗಳ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಹಾಗೂ   ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ ಪ್ರತಿಸ್ಪರ್ಧಿ ಬಣಗಳು  ಮುಂಬೈ, ಥಾಣೆ ಹಾಗೂ ಮಹಾರಾಷ್ಟ್ರದ ಇತರ ನಗರಗಳಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹಾಗೂ ಪಕ್ಷದ ನಾಯಕ ಆನಂದ್ ದಿಘೆ ಅವರ ಫೋಟೋಗಳೊಂದಿಗೆ ಹೋರ್ಡಿಂಗ್‌ಗಳು ಹಾಗೂ ಬ್ಯಾನರ್‌ಗಳನ್ನು ಹಾಕಿವೆ .

ಏಕನಾಥ್ ಶಿಂಧೆ ಬೆಂಬಲಿಗರು ಥಾಣೆಯ ಟೆಂಬಿ ನಾಕಾದಲ್ಲಿ ದಹಿ ಹಂಡಿ ಆಯೋಜಿಸಿದ್ದರೆ, ಉದ್ಧವ್ ಠಾಕ್ರೆ ಬಣ ಕೇವಲ 200 ಮೀಟರ್ ದೂರದಲ್ಲಿರುವ ಜಾಂಬ್ಲಿ ನಾಕಾದಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದೆ.

 “ತಮ್ಮ ಕಾರ್ಯಕ್ರಮವು ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರಿಗೆ ಗೌರವವನ್ನು ಬಿಂಬಿಸುತ್ತದೆ'' ಎಂದು ಕಲ್ಯಾಣ್ ಸಂಸದ ಹಾಗೂ  ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಹೇಳಿದರು. ಮತ್ತೊಂದೆಡೆ, "ತಮ್ಮ  ಕಾರ್ಯಕ್ರಮವು ನಿಷ್ಠೆ, ಏಕತೆ, ಸಂಸ್ಕೃತಿ ಮತ್ತು ಹಿಂದುತ್ವದ ಧ್ವನಿಯನ್ನು ಪ್ರತಿಬಿಂಬಿಸುತ್ತದೆ'' ಎಂದು ಠಾಕ್ರೆ ಬಣದ ಸಂಸದ ರಾಜನ್ ವಿಚಾರೆ ಹೇಳಿದರು.

ಮುಂಬೈ ಹಾಗೂ ಥಾಣೆಯಲ್ಲಿ ನಡೆಯಲಿರುವ ‘ದಹಿ ಹಂಡಿ’ ಕಾರ್ಯಕ್ರಮಗಳಲ್ಲಿ ವಿಜೇತ ತಂಡಗಳಿಗೆ ಶಿಂಧೆ ಬಣ  2.51 ಲಕ್ಷ ರೂ. ಬಹುಮಾನ ಘೋಷಿಸಿದ್ದು, ಥಾಣೆಯಲ್ಲಿ ನಡೆಯುವ ಠಾಕ್ರೆ ಬಣದ ಕಾರ್ಯಕ್ರಮದಲ್ಲಿ ವಿಜೇತ ತಂಡ  1.11 ಲಕ್ಷ ರೂ. ಬಹುಮಾನ ಪಡೆಯಲಿದೆ.

ಥಾಣೆ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರ ಸಂಘಟನೆ ಆಯೋಜಿಸಿರುವ ಮತ್ತೊಂದು ಕಾರ್ಯಕ್ರಮವು ಒಟ್ಟು  21 ಲಕ್ಷ  ರೂ. ಬಹುಮಾನವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News