×
Ad

ಉತ್ತರಪ್ರದೇಶ: 250 ರೂ.ಶಾಲಾ ಶುಲ್ಕ ವಿಚಾರಕ್ಕೆ ದಲಿತ ಬಾಲಕನನ್ನು ಹೊಡೆದು ಕೊಂದ ಶಿಕ್ಷಕ

Update: 2022-08-19 16:12 IST

ಹೊಸದಿಲ್ಲಿ:ರಾಜಸ್ಥಾನದ ಜಾಲೋರ್ ಮಾದರಿಯ ಮತ್ತೊಂದು ಭಯಾನಕ ಘಟನೆ ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದೆ. 3ನೇ ತರಗತಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿಯನ್ನು 250 ರೂ. ಶಾಲಾ ಶುಲ್ಕದ ವಿಚಾರದಲ್ಲಿ ಮೇಲ್ಜಾತಿಗೆ ಸೇರಿದ ಶಿಕ್ಷಕ ನಿರ್ದಯವಾಗಿ ಥಳಿಸಿದ್ದಾನೆ. 

ಶಾಲಾ ಶುಲ್ಕದ ವಿಚಾರದಲ್ಲಿ  ಕಳೆದ ವಾರ ತನ್ನ ಶಾಲಾ ಶಿಕ್ಷಕರಿಂದ ತೀವ್ರವಾಗಿ ಥಳಿತಕ್ಕೊಳಗಾದ  13 ವರ್ಷದ ದಲಿತ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಉತ್ತರ ಪ್ರದೇಶದ ಬಹ್ರೈಚ್‌ನ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 

"ಸಿರ್ಸಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಹಳ್ಳಿಯ ಸಮೀಪವಿರುವ ಶಾಲೆಗೆ ಹೋಗಿದ್ದ 3 ನೇ ತರಗತಿಯ 13 ವರ್ಷದ ವಿದ್ಯಾರ್ಥಿ ಆಗಸ್ಟ್ 17 ರಂದು ಬಹ್ರೈಚ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಬಾಲಕನಿಗೆ ಮೇಲ್ಜಾತಿಗೆ ಸೇರಿರುವ  ಶಾಲಾ ಶಿಕ್ಷಕರೊಬ್ಬರು ಥಳಿಸಿದ್ದಾರೆ ಎಂದು ಬಾಲಕನ ಚಿಕ್ಕಪ್ಪ ನೀಡಿರುವ  ದೂರಿನಲ್ಲಿ ತಿಳಿಸಿದ್ದಾರೆ. ಆಗಸ್ಟ್ 8ರಂದು  ಪ್ರಕರಣ ದಾಖಲಿಸಲಾಗಿದೆ ಹಾಗೂ  ತನಿಖೆ ನಡೆಯುತ್ತಿದೆ ”ಎಂದು ಶ್ರವಸ್ತಿ ಎಸ್ಪಿ ಅರವಿಂದ್ ಕೆ. ಮೌರ್ಯ ಹೇಳಿಕೆ ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

 “ತಿಂಗಳಿಗೆ 250 ರೂ. ಶಾಲಾ ಶುಲ್ಕದ ಕಾರಣಕ್ಕಾಗಿ ನನ್ನ ಸಹೋದರನನ್ನು ಶಿಕ್ಷಕರು ಹೊಡೆದಿದ್ದಾರೆ.  ನಾನು ಅದನ್ನು ಆನ್‌ಲೈನ್‌ನಲ್ಲಿ ನೀಡಿದ್ದೆ.  ಆದರೆ ಶಿಕ್ಷಕರಿಗೆ ಅದು ತಿಳಿದಿರಲಿಲ್ಲ ಮತ್ತು ನನ್ನ ಸಹೋದರನನ್ನು ಅಮಾನುಷವಾಗಿ ಥಳಿಸಲಾಯಿತು ... ಅವನ ಕೈ ಮುರಿತವಾಗಿದೆ ಹಾಗೂ  ಆಂತರಿಕವಾಗಿ  ರಕ್ತಸ್ರಾವವಾಗಿದೆ ... ಶಿಕ್ಷಕ ನನ್ನ ಸಹೋದರನನ್ನು  ಕೊಂದರು ”ಎಂದು ಮೃತನ ಸಹೋದರ ರಾಜೇಶ್ ವಿಶ್ವಕರ್ಮ ಹೇಳಿದರು.

 ಈ ಘಟನೆಯು ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಸುದ್ದಿ ಮಾಸುವ ಮೊದಲ ನಡೆದಿದೆ. ರಾಜಸ್ಥಾನದ  ಜಲೋರ್ ಜಿಲ್ಲೆಯಲ್ಲಿ ಪಾತ್ರೆಯಿಂದ ನೀರು ಕುಡಿದಿದ್ದಕ್ಕಾಗಿ ಶಿಕ್ಷಕರಿಂದ ದಲಿತ ಬಾಲಕ ಥಳಿಲಸ್ಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News