ಬಿಲ್ಕಿಸ್ ಬಾನು ಪ್ರಕರಣ: ʼಅತ್ಯಾಚಾರಿಗಳು ಬಿಡುಗಡೆಯಾಗಿರುವುದಕ್ಕೆ ನ್ಯಾಯಾಧೀಶರನ್ನು ದೂರಬೇಡಿʼ ಎಂದ ಪ್ರಕರಣದ ಜಡ್ಜ್
ಹೊಸದಿಲ್ಲಿ: ಬಿಲ್ಕಿಸ್ ಬಾನೊ(Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಮಂದಿಗಳನ್ನು ದೋಷಿಗಳೆಂದು ಘೋಷಿಸಿದ ಆದೇಶವನ್ನು ಎತ್ತಿ ಹಿಡಿದಿದ್ದ ಜಸ್ಟಿಸ್ ಮೃದುಲಾ ಭಟ್ಕರ್(Justice Mridula Bhatkar), ಇದೀಗ ಅಪರಾಧಿಗಳ ಬಿಡುಗಡೆಗೆ ನ್ಯಾಯಾಂಗವನ್ನು ದೂರಬೇಡಿ ಎಂದು ಹೇಳಿದ್ದಾರೆ. ಅವರನ್ನು ಬಿಡುಗಡೆಗೊಳಿಸುವ ನಿರ್ಧಾರ ಸರಕಾರದ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು "ಜನರು ನ್ಯಾಯಾಂಗದ ವಿರುದ್ಧ ಏಕೆ ಪ್ರತಿಭಟಿಸುತ್ತಿದ್ದಾರೆಂದು ತಿಳಿದಿಲ್ಲ. ನ್ಯಾಯಾಂಗವು ಜನರ ಹಕ್ಕುಗಳನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದೆ, ಆದರೆ ನಮ್ಮನ್ನು ಟೀಕಿಸುವಾಗ ನಮಗೆ ಬೇಸರವಾಗುತ್ತದೆ ಮತ್ತು ನಮ್ಮನ್ನು ಸಮರ್ಥಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳಿದರು.
ಸೆಷನ್ಸ್ ನ್ಯಾಯಾಲಯದಿಂದ(Setions Court) ಹಿಡಿದು ಸುಪ್ರೀಂ ಕೋರ್ಟ್(Supreme Court) ತನಕ ನ್ಯಾಯಾಂಗ ವ್ಯವಸ್ಥೆಯ ಮೂರು ಹಂತಗಳೂ ಜನರಿಗೆ ನ್ಯಾಯದಾನಕ್ಕಾಗಿ ಶ್ರಮಿಸಿವೆ ಎಂದು ಅವರು ಹೇಳಿದರು.
ಪ್ರಸ್ತುತ ಮಹಾರಾಷ್ಟ್ರ ಆಡಳಿತಾತ್ಮಕ ಟ್ರಿಬ್ಯುನಲ್‍ನ ಅಧ್ಯಕ್ಷೆಯಾಗಿರುವ ಜಸ್ಟಿಸ್ ಭಟ್ಕರ್ ಅವರು ಜಸ್ಟಿಸ್ ವಿ ಕೆ ತಹಿಲ್‍ರಮನಿ ಅವರ ನೇತೃತ್ವ ವಿಭಾಗೀಯ ಪೀಠದ ಭಾಗವಾಗಿ 2002ರ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಸಿಬಿಐ ಮತ್ತು ಅಪರಾಧಿಗಳು ಸಲ್ಲಸಿದ್ದ ಅಪೀಲುಗಳ ಮೇಲೆ ದೈನಂದಿನ ವಿಚಾರಣೆ ನಡೆಸಿದ್ದರು.
ಸೆಷನ್ಸ್ ನ್ಯಾಯಾಲಯ ಈ ಪ್ರಕರಣದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ವಿಚಾರಣಾ ನ್ಯಾಯಾಲಯ ಏಳು ಮಂದಿಯನ್ನು ಖುಲಾಸೆಗೊಳಿಸಿದ್ದರೆ ಅದನ್ನು ಪ್ರಶ್ನಿಸಿ ಸಿಬಿಐ ಅಪೀಲು ಸಲ್ಲಿಸಿತ್ತು.
ಜೀವಾವಧಿ ಶಿಕ್ಷೆಗಿಂತಲೂ ಹೆಚ್ಚಿನ ಶಿಕ್ಷೆ ನೀಡಲು ನಿರಾಕರಿಸಿದ್ದ ವಿಭಾಗೀಯ ಪೀಠ ಪ್ರಕರಣದ ಮೂರು ಆರೋಪಿಗಳಿಗೆ ಮರಣದಂಡನೆ ವಿಧಿಸಲು ನಿರಾಕರಿಸಿತ್ತು. "ಘಟನೆ 2002ರಲ್ಲಿ ನಡೆದಿತ್ತು ಹಾಗೂ ಈಗ 15 ವರ್ಷಗಳೇ ಕಳೆದಿವೆ. ಈಗಾಗಲೇ ಅವರು ಈ ಸಮಯ ಕಸ್ಟಡಿಯಲ್ಲಿ ಕಳೆದಿದ್ದಾರೆ. ಹೀಗಿರುವಾಗ ಇನ್ನಷ್ಟು ಹೆಚ್ಚಿನ ಅವಧಿಯ ಶಿಕ್ಷೆ ವಿಧಿಸಲು ಬಯಸುವುದಿಲ್ಲ" ಎಂದು ನ್ಯಾಯಪೀಠ ಹೇಳಿತ್ತು.
ವಿಭಾಗೀಯ ಪೀಠವು 11 ಮಂದಿಯನ್ನು ದೋಷಿಯೆಂದು ಗುರುತಿಸಿರುವುದನ್ನು ಎತ್ತಿ ಹಿಡಿಯಿತಲ್ಲದೆ ಕರ್ತವ್ಯ ಲೋಪಕ್ಕಾಗಿ 7 ಪೊಲೀಸರು ಹಾಗೂ ವೈದ್ಯರಿಗೂ ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣಾಧೀನ ನ್ಯಾಯಾಲಯ ಈ ನಿಟ್ಟಿನಲ್ಲಿ ಯಾವುದೇ ಆದೇಶ ಹೊರಡಿಸಿರಲಿಲ್ಲ. ಪೊಲೀಸರು ಬಿಲ್ಕಿಸ್‍ಗೆ(Bilkis Bano) ಆಕೆಯ ಮೃತ ಸಂಬಂಧಿಕರ ಕಳೇಬರಗಳನ್ನು ತೋರಿಸಿಲ್ಲ ಎಂಬ ಆರೋಪ ಎದುರಿಸಿದ್ದರೆ ವೈದ್ಯರು ಪೋಸ್ಟ್‍ಮಾರ್ಟಂ ನಡೆಸಲು ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಹೊತ್ತಿದ್ದರು.
ಈ ಪೊಲೀಸರು ಮತ್ತು ವೈದ್ಯರು ಸುಪ್ರೀಂ ಕದ ತಟ್ಟಿದ್ದರೂ ಅವರ ಅಪೀಲು ತಿರಸ್ಕೃತಗೊಂಡಿತ್ತು.