ಸ್ಟರ್ಲೈಟ್ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಪ್ರಕರಣ: ವರದಿ ಸಲ್ಲಿಸಿದ ತನಿಖಾ ಆಯೋಗ
ಹೊಸದಿಲ್ಲಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ 2018ರಲ್ಲಿ ಸ್ಟರ್ಲೈಟ್ ಕಾಪರ್ ಪ್ಲಾಂಟ್(Sterlite copper plant) ವಿರುದ್ಧ ನಡೆದ ಪ್ರತಿಭಟನೆ(protest) ವೇಳೆ ಪೊಲೀಸರು ನಡೆಸಿದ ಗೋಲಿಬಾರು ಅಪ್ರಚೋದಿತ ಮತ್ತು ವಿವೇಚನಾರಹಿತವಗಿತ್ತು ಎಂದು ಈ ಘಟನೆಯ ತನಿಖೆ ನಡೆಸಿದ್ದ ಮದ್ರಾಸ್ ಹೈಕೋರ್ಟಿನ(madras highcourt) ಮಾಜಿ ನ್ಯಾಯಾಧೀಶ ಅರುಣ್ ಜಗದೀಶನ್ ಅವರ ನೇತೃತ್ವದ ಆಯೋಗ ತನ್ನ ಅಂತಿಮ ವರದಿಯಲ್ಲಿ ಹೇಳಿದೆ. ಈ ವರದಿಯನ್ನು ತಮಿಳುನಾಡು ಸರಕಾರಕ್ಕೆ ಮೇ ತಿಂಗಳಿನಲ್ಲಿ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ಮೇ 22, 2018ರಂದು ನಡೆದ ಪೊಲೀಸ್ ಗೋಲಿಬಾರಿನಲ್ಲಿ 13 ಮಂದಿ ಪ್ರತಿಭಟನಾಕಾರರು ಮೃತಪಟ್ಟಿದ್ದರು. ಸ್ಥಾವರವನ್ನು ನಂತರ ಬಂದ್ ಮಾಡಲಾಗಿತ್ತು. ಈ ಸ್ಥಾವರದ ಕಾರ್ಯಾಚರಣೆಯಿಂದ ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯ ಉಂಟಾಗಿದೆ ಎಂದು ಆರೋಪಿಸಿ ಪ್ರತಿಭಟಿಸಲಾಗಿತ್ತು.
"ಮರೆಯಲ್ಲಿ ನಿಂತು ತಮ್ಮಿಂದ ಬಹಳ ದೂರದಲ್ಲಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಪ್ರಕರಣ ಇದಾಗಿದೆ. ಪ್ರತಿಭಟನಾಕಾರರ ಉದ್ರಿಕ್ತ ಗುಂಪನ್ನು ನಿಭಾಯಿಸಲೆಂದೇ ಗೋಲಿಬಾರ್ ನಡೆಸಲಾಗಿತ್ತೆಂಬುದಕ್ಕೆ ಯಾವುದೇ ಪುರಾವೆ ಅಥವಾ ದಾಖಲೆಯಿಲ್ಲ" ಎಂದು ಆಯೋಗದ ವರದಿ ಹೇಳಿದೆ.
ಗೋಲಿಬಾರಿಗೆ ಆಗಿನ ಉನ್ನತ ಪೊಲೀಸ್ ಅಧಿಕಾರಿಗಳಾದ ಐಜಿಪಿ (ದಕ್ಷಿಣ ವಲಯ) ಶೈಲೇಶ್ ಕುಮಾರ್ ಯಾದವ್, ಡಿಐಜಿ (ತಿರುನಲ್ವೇಲಿ ವಲಯ) ಕಪಿಲ್ ಕುಮಾರ್ ಸಿ ಸರತ್ಕರ್, ಎಸ್‍ಪಿ (ತೂತುಕಡಿ) ಪಿ ಮಹೇಂದ್ರನ್ ಮತ್ತು ಡಿವೈಎಸ್ಪಿ ಲಿಂಗತಿರುಮಾರನ್ ಕಾರಣ ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಅಧಿಕಾರಿಗಳು ತಮ್ಮ ಎಲ್ಲೆಯನ್ನು ಮೀರಿದ್ದಾರೆ, ಅವರ ವಿರುದ್ಧ ತಮಿಳುನಾಡು ಸರಕಾರ ಕ್ರಮಕೈಗೊಳ್ಳಬೇಕೆಂದು ವರದಿ ಹೇಳಿದೆ.
"ಪೊಲೀಸರು(police) ದೂರದಿಂದ ಗುಂಡು ಹಾರಿಸಿದ್ದರು ಹಾಗೂ ಇದಕ್ಕಾಗಿ ಶಾರ್ಪ್‍ಶೂಟರ್‍ಗಳನ್ನು(sharp shooters) ಬಳಸಲಾಗಿತ್ತು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರೂ ಇದರಿಂದ ತಕ್ಷಣಕ್ಕೆ ಪೊಲೀಸರಿಗೆ ಯಾವುದೇ ಅಪಾಯವಿರಲಿಲ್ಲ" ಎಂದೂ ವರದಿ ಹೇಳಿದೆ. ಮಣಿಕಂಡನ್ ಎಂಬ ಒಬ್ಬ ಪೊಲೀಸ್ ಸಿಬ್ಬಂದಿಗೆ ಹೊರತುಪಡಿಸಿ ಇತರ ಯಾರಿಗೂ ಗಂಭೀರ ಗಾಯಗಳುಂಟಾಗಿಲ್ಲ ಎಂಬುದನ್ನೂ ವರದಿ ಗಣನೆಗೆ ತೆಗೆದುಕೊಂಡಿದೆ.
"ಪೊಲೀಸರು ಗೋಲಿಬಾರ್ ನಡೆಸುವ ಬದಲು ಹಾನಿಯುಂಟು ಮಾಡದ ಅಸ್ತ್ರಗಳನ್ನು ಬಳಸಿ ಗುಂಪನ್ನು ನಿಯಂತ್ರಿಸಬೇಕಿತ್ತು" ಎಂದು ವರದಿ ಹೇಳಿದೆ.