ಅಬಕಾರಿ ನೀತಿ ಉಲ್ಲಂಘನೆ ಆರೋಪ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಮೊದಲ ಆರೋಪಿ

Update: 2022-08-19 16:58 GMT

ದಿಲ್ಲಿ ಅಬಕಾರಿ ನೀತಿ: ಆಪ್ ನಾಯಕರು ವಶಕ್ಕೆ, ಡಿಸಿಎಂ ಸಿಸೋಡಿಯಾರ ನಿವಾಸ, ಇತರ 20 ಸ್ಥಳಗಳಲ್ಲಿ ಸಿಬಿಐ ದಾಳಿ (ಅಪ್ಡೇಟ್)

  ಹೊಸದಿಲ್ಲಿ,ಆ.19: ದಿಲ್ಲಿ ಸರಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾರ ನಿವಾಸ ಮತ್ತು ಇತರ 20 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದು ‘ಮೇಲಿನ ಆದೇಶದಂತೆ ’ಸಿಬಿಐ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿರುವ ಆಪ್ ಮತ್ತು ಕೇಂದ್ರ ಸರಕಾರದ ನಡುವಿನ ಉದ್ವಿಗ್ನತೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಮಾಧ್ಯಮ ವರದಿಗಳಂತೆ ಆಪ್ ನಾಯಕರನ್ನು ವಶಕ್ಕೆ ತೆಗೆದುಕೊಂಡಿರುವ ದಿಲ್ಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದ ಸುತ್ತ ಮತ್ತು ಹೊಸದಿಲ್ಲಿ ಜಿಲ್ಲೆಯಲ್ಲಿ ಕಲಂ 144ನ್ನು ಹೇರಿದ್ದಾರೆ. ಶುಕ್ರವಾರ ಬೆಳಿಗ್ಗೆ ಸಿಸೋದಿಯಾರ ನಿವಾಸದ ಸುತ್ತಮುತ್ತ ಮತ್ತು ಮಥುರಾ ರೋಡ್ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.

ಕಳೆದ ವರ್ಷದ ನವಂಬರ್ನಲ್ಲಿ ದಿಲ್ಲಿ ಸರಕಾರವು ತಂದಿದ್ದ ಹೊಸ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಅವ್ಯವಹಾರಗಳ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡ ಬಳಿಕ ಸಿಬಿಐ ಸಿಸೋದಿಯಾ ಮತ್ತು ಮಾಜಿ ಅಬಕಾರಿ ಆಯುಕ್ತ ಅರವ ಗೋಪಿಕೃಷ್ಣ ಅವರ ನಿವಾಸಗಳು ಮತ್ತು ಇತರ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಶೋಧ ಕಾರ್ಯಾಚರಣೆಗಳು ನಡೆದಿವೆ.

         

ಇತರ ಇಬ್ಬರು ಸರಕಾರಿ ಅಧಿಕಾರಿಗಳ ನಿವಾಸಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಅಬಕಾರಿ ನೀತಿಯಲ್ಲಿ ಅಕ್ರಮಗಳ ಆರೋಪ: ಏನಿದು ಪ್ರಕರಣ?

ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ರೂಪಿಸಲಾದ ನೂತನ ಅಬಕಾರಿ ನೀತಿ 2021-22 ಅನ್ನು ಕಳೆದ ವರ್ಷದ ನವಂಬರ್ನಲ್ಲಿ ಜಾರಿಗೊಳಿಸಲಾಗಿತ್ತು ಮತ್ತು ಅದರಡಿ ನಗರದ 32 ವಲಯಗಳಲ್ಲಿಯ 849 ಮದ್ಯದಂಗಡಿಗಳಿಗಾಗಿ ಖಾಸಗಿ ಬಿಡ್ಡರ್ಗಳಿಗೆ ಚಿಲ್ಲರೆ ಪರವಾನಿಗೆಗಳನ್ನು ನೀಡಲಾಗಿತ್ತು.

ನೂತನ ನೀತಿಯಡಿ ಅಬಕಾರಿ ಇಲಾಖೆಯು ವರ್ಷವೊಂದರಲ್ಲಿ ಮದ್ಯರಹಿತ ದಿನಗಳ ಸಂಖ್ಯೆಯನ್ನು 21ರಿಂದ 3ಕ್ಕೆ ತಗ್ಗಿಸಿತ್ತು, ಚಿಲ್ಲರೆ ಮದ್ಯ ಮಾರಾಟ ಕ್ಷೇತ್ರದಿಂದ ಸರಕಾರವು ನಿರ್ಗಮಿಸಿತ್ತು. ಬಾರ್ ಮತ್ತು ರೆಸ್ಟಾರಂಟ್ಗಳನ್ನು ನಸುಕಿನ ಮೂರು ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸಲಾಗಿತ್ತು (ಇದಿನ್ನೂ ಪೊಲೀಸ್ ಅನುಮತಿಗಾಗಿ ಕಾಯುತ್ತಿದೆ). ಜೊತೆಗೆ ಮದ್ಯದ ಮೇಲೆ ರಿಯಾಯಿತಿಗಳು ಮತ್ತು ಯೋಜನೆಗಳನ್ನು ಪ್ರಕಟಿಸಲು ಚಿಲ್ಲರೆ ಪರವಾನಿಗೆದಾರರಿಗೆ ಅನುಮತಿ ನೀಡಲಾಗಿತ್ತು.

ಆದಾಗ್ಯೂ ನೂತನ ನೀತಿಯಡಿ ಅನುಗುಣವಲ್ಲದ ಪ್ರದೇಶಗಳಲ್ಲಿಯ ಅನೇಕ ಮದ್ಯದಂಗಡಿಗಳನ್ನು ಆರಂಭಿಸಲು ಸಾಧ್ಯವಾಗಿರಲಿಲ್ಲ. ಮಾಸ್ಟರ್ ಪ್ಲಾನ್ ಉಲ್ಲಂಘನೆಗಾಗಿ ಇಂತಹ ಹಲವಾರು ಅಂಗಡಿಗಳಿಗೆ ಮಹಾನಗರ ಪಾಲಿಕೆಗಳು ಬೀಗಮುದ್ರೆ ಹಾಕಿದ್ದವು.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಟೆಂಡರ್ ಆಗಿದ್ದ ಪರವಾನಿಗೆ ಶುಲ್ಕಗಳ ಮೇಲೆ 144.36 ಕೋ.ರೂ.ಮನ್ನಾ ಸೇರಿದಂತೆ ಅಬಕಾರಿ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಸಿಸೋಡಿಯಾ ಆಗಿನ ಉಪ ರಾಜ್ಯಪಾಲ ಅನಿಲ ಬೈಜಾಲ್ ಅವರ ಅನುಮತಿಯನ್ನು ಪಡೆದುಕೊಳ್ಳದೆ ಮಾಡಿದ್ದರೆಂದು ಆರೋಪಿಸಲಾಗಿದೆ.

ದಿಲ್ಲಿ ಮುಖ್ಯ ಕಾರ್ಯದರ್ಶಿಗಳು ಜುಲೈನಲ್ಲಿ ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿತ್ತು. ಹಲವಾರು ನಿಯಮಗಳ ಉಲ್ಲಂಘನೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ವಿದೇಶಿ ಮದ್ಯದ ದರಗಳನ್ನು ಪರಿಷ್ಕರಿಸುವ ಮತ್ತು ಪ್ರತಿ ಕೇಸ್ ಬಿಯರ್ ಮೇಲಿನ 50 ರೂ.ಆಮದು ಪಾಸ್ ಶುಲ್ಕವನ್ನು ತೆಗೆದುಹಾಕುವ ಮೂಲಕ ಸಿಸೋಡಿಯಾ ಪರವಾನಿಗೆದಾರರಿಗೆ ಅನುಚಿತ ಲಾಭಗಳನ್ನು ನೀಡಿದ್ದಾರೆ ಮತ್ತು ತನ್ಮೂಲಕ ವಿದೇಶಿ ಮದ್ಯ ಹಾಗೂ ಬಿಯರ್ನ ಮಾರಾಟ ಬೆಲೆಗಳನ್ನು ಅಗ್ಗಗೊಳಿಸಿದ್ದಾರೆ ಮತ್ತು ಸರಕಾರದ ಆದಾಯಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿಗಳ ವರದಿಯು ಬೆಟ್ಟು ಮಾಡಿತ್ತು.

ಬಳಿಕ ಕಳೆದ ತಿಂಗಳು ದಿಲ್ಲಿಯ ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಅಬಕಾರಿ ನೀತಿಯ ಅನುಷ್ಠಾನದಲ್ಲಿನ ಹಣಕಾಸು ಅವ್ಯವಹಾರಗಳ ತನಿಖೆಗಾಗಿ ಪ್ರಕರಣವನ್ನು ದಾಖಲಿಸುವಂತೆ ಸಿಬಿಐಗೆ ಶಿಫಾರಸು ಮಾಡಿದ್ದರು.

ಉಪರಾಜ್ಯಪಾಲರ ಸೂಚನೆಯಂತೆ ನೀತಿಯ ಅಕ್ರಮ ಸೂತ್ರೀಕರಣ, ತಿದ್ದುಪಡಿಗಳು ಮತ್ತು ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕ ಸೇವಕರ ಪಾತ್ರಗಳನ್ನು ವಿವರಿಸಿ ಮುಖ್ಯ ಕಾರ್ಯದರ್ಶಿಗಳು ವರದಿಯನ್ನು ಸಲ್ಲಿಸಿದ್ದರು. ಇದರ ಮೇರೆಗೆ 11 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲು ಸಕ್ಸೇನಾ ಒಪ್ಪಿಗೆ ನೀಡಿದ್ದರು.

ಬಾಕ್ಸ್ ದಾಳಿಗಳನ್ನು ಸ್ವಾಗತಿಸಿದ ಸಿಸೋದಿಯಾ

‘ದಾಳಿ ನಡೆಸಲು ಸಿಬಿಐ ಬಂದಿದೆ,ಅವರಿಗೆ ಸುಸ್ವಾಗತ. ನಾವು ಅತ್ಯಂತ ಪ್ರಾಮಾಣಿಕರಾಗಿದ್ದೇವೆ ಮತ್ತು ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸಲು ದೃಢಸಂಕಲ್ಪ ಮಾಡಿದ್ದೇವೆ. ನಮ್ಮ ದೇಶದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವವರಿಗೆ ಹೀಗೆ ಕಿರುಕುಳ ನೀಡುವುದು ಅತ್ಯಂತ ದುರದೃಷ್ಟಕರವಾಗಿದೆ,ಇದೇ ಕಾರಣದಿಂದ ನಮ್ಮ ದೇಶವಿನ್ನೂ ನಂ.1 ಆಗಿಲ್ಲ ’ಎಂದು ಸಿಸೋದಿಯಾ ಟ್ವೀಟ್ನಲ್ಲಿ ಹೇಳಿದ್ದಾರೆ.

ಸಿಸೋಡಿಯಾ ಅಬಕಾರಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದಾರೆ.

ಈ ದಾಳಿಗಳಿಂದ ಯಾವುದೇ ಫಲವಿಲ್ಲ:ಕೇಜ್ರಿವಾಲ್

ಸಿಸೋಡಿಯಾ ನಿವಾಸಕ್ಕೆ ಸಿಬಿಐ ದಾಳಿಯು ಜಾಗತಿಕವಾಗಿ ಮೆಚ್ಚಿಕೊಳ್ಳಲಾಗಿರುವ ಉತ್ತಮ ಸಾಧನೆಯ ಫಲಶ್ರುತಿಯಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು. ಈ ಹಿಂದೆಯೂ ಸಿಬಿಐ ದಾಳಿಗಳು ನಡೆದಿದ್ದವು ಮತ್ತು ಈ ದಾಳಿಯಿಂದಲೂ ಯಾವುದೇ ಫಲವಿಲ್ಲ ಎಂದರು.

‘ನಮ್ಮ ಅಭಿಯಾನದ ಮಾರ್ಗದಲ್ಲಿ ಹಲವಾರು ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಸಿಸೋದಿಯಾ ಮೇಲಿನ ಮೊದಲ ದಾಳಿಯಲ್ಲ,ಹಿಂದೆಯೂ ದಾಳಿಗಳು ನಡೆದಿವೆ. ನಮ್ಮ ಹಲವಾರು ಸಚಿವರು ಮತ್ತು ನನ್ನ ಮೇಲೂ ದಾಳಿಗಳು ನಡೆದಿವೆ,ಆದರೆ ಯಾವುದೇ ಫಲ ದೊರಕಿಲ್ಲ ಮತ್ತು ಈಗಲೂ ಅದೇ ಆಗಲಿದೆ ’ಎಂದು ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ತಿಳಿಸಿದರು.

ಸಿಸೋಡಿಯಾರನ್ನು ವಿಶ್ವದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಬಣ್ಣಿಸಿದ ಕೇಜ್ರಿವಾಲ್,‘ದಿಲ್ಲಿಯ ಶಿಕ್ಷಣ ಕ್ರಾಂತಿ’ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯನ್ನು ಪ್ರದರ್ಶಿಸಿದರು.

ಚರ್ಚೆಗೆ ಧ್ವನಿಗೂಡಿಸಿದ ಕಾಂಗ್ರೆಸ್

ರಾಜಕೀಯ ಎದುರಾಳಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ನಿರಂತರ ದುರುಪಯೋಗ ಅವುಗಳ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ ಮತ್ತು ಭ್ರಷ್ಟರು ಪಾರಾಗಲು ಅವಕಾಶವನ್ನೂ ಒದಗಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪವನ ಖೇರಾ ಟ್ವೀಟಿಸಿದ್ದಾರೆ.

 15 ಜನರ ವಿರುದ್ಧ ಎಫ್ಐಆರ್ ದಾಖಲು

ಅಬಕಾರಿ ನೀತಿ 2021-22ರಲ್ಲಿ ಅವ್ಯವಹಾರಗಳ ಆರೋಪದಲ್ಲಿ ಸಿಬಿಐ ಶುಕ್ರವಾರ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಸೇರಿದಂತೆ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಮಾಜಿ ಅಬಕಾರಿ ಆಯುಕ್ತ ಆರವ ಗೋಪಿಕೃಷ್ಣ,ಉಪ ಆಯುಕ್ತ ಆನಂದ ತಿವಾರಿ ಮತ್ತು ಸಹಾಯಕ ಆಯುಕ್ತ ಪಂಕಜ ಭಟ್ನಾಗರ್,ಮುಂಬೈ ಮತ್ತು ದಿಲ್ಲಿಯ ಉದ್ಯಮಿಗಳು ಆರೋಪಿಗಳಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News