ಹೈದರಾಬಾದ್: ಮುನವ್ವರ್‌ ಫಾರೂಕಿ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ ರಾಜಾಸಿಂಗ್‌ ಬಂಧನ

Update: 2022-08-19 15:26 GMT
Facebook/Munawar Faruqui

ಹೈದರಾಬಾದ್: ಹೈದರಾಬಾದ್‌ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ(Munawar Faruqui) ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಪದೇ ಪದೇ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್(T. Raja Singh) ಅವರನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ರಾಜಾ ಸಿಂಗ್‌ ಬಂಧನದ ಬಳಿಕ ಅವರ ಇನ್‌ಸ್ಟಾಗ್ರಾಂ(Instagram) ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು, ಟಿಆರ್‌ಎಸ್‌(TRS) ಪಕ್ಷವು ಸಂಪೂರ್ಣ ಹಿಂದೂ ವಿರೋಧಿ ಪಕ್ಷವಾಗಿದೆ. ಆಗಸ್ಟ್‌ 22ರಂದು ಏನಾದರೂ ಸಂಭವಿಸಿದರೆ ಅದಕ್ಕೆ ಡಿಆರ್‌ಎಸ್‌ ಸರಕಾರ ಮತ್ತು ತೆಲಂಗಾಣ ಪೊಲೀಸರು ಜವಾಬ್ದಾರರಾಗಿರುತ್ತಾರೆ ಎಂದು ಹೇಳಲಾಗಿದೆ.

ರಾಜಾ ಸಿಂಗ್‌ ರ ಬಂಧನದ ಕುರಿತು ಹಿರಿಯ ಅಧಿಕಾರಿಯೋರ್ವರು indianexpress ಗೆ ದೃಢಪಡಿಸಿದ್ದು, ಶುಕ್ರವಾರ ಬೆಳಗ್ಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. "ಇಂದು ಬಂಧನವೇನಲ್ಲ. ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದೇವೆ" ಎಂದು ಅವರು ಹೇಳಿದರು. ಕಾರ್ಯಕ್ರಮ ಮುಗಿಯುವವರೆಗೆ ಅವರನ್ನು ಬಂಧನದಲ್ಲಿಡಲಾಗುವುದೇ? ಎಂಬ ಪ್ರಶ್ನೆಗೆ, "ಅದು ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಲಾಗುವುದು" ಎಂದು ಅವರು ಉತ್ತರಿಸಿದ್ದಾಗಿ ವರದಿ ತಿಳಿಸಿದೆ. 

ಹೈದರಾಬಾದ್‌ ನಲ್ಲಿ ಮುನವ್ವರ್‌ ಕಾರ್ಯಕ್ರಮಕ್ಕೆ ರಾಜಾಸಿಂಗ್‌ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ವರ್ಷಾರಂಭದಲ್ಲಿ ಜನವರಿ 9ರಂದು ನಿರ್ಧರಿಸಲಾಗಿದ್ದ ಕಾರ್ಯಕ್ರಮವನ್ನು ತೀವ್ರ ವಿರೋಧದ ಬಳಿಕ ರದ್ದುಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News