ʼಬಿಜೆಪಿಯವರು ನೀಡುವ ಉಚಿತ ವಸ್ತುಗಳು ದೇವರ ಕೈಯಿಂದ ಬರುತ್ತಿದೆಯೇ?ʼ: ತಮಿಳುನಾಡು ವಿತ್ತ ಸಚಿವ ತ್ಯಾಗರಾಜನ್

Update: 2022-08-20 15:14 GMT

ಚೆನ್ನೈ: ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ(Election) ವೇಳೆ ಭರವಸೆ ನೀಡುವ ಉಚಿತ ವಸ್ತುಗಳು(Freebies) (ಫ್ರೀಬೀಸ್) ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ಮುಂದಿರುವ ನಡುವೆ ಈ ವಿಚಾರ ಸಾಕಷ್ಟು ಚರ್ಚೆಗೀಡಾಗುತ್ತಿದೆ. ಇದೀಗ ತಮಿಳುನಾಡು ವಿತ್ತ ಸಚಿವ ಡಾ ಪಿ ತ್ಯಾಗರಾಜನ್(P. Thiagarajan) ಈ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿರುವ ಉಚಿತ ಸವಲತ್ತುಗಳು "ದೇವರ ಕೈಯಿಂದ ಕೆಳಗಿಳಿದು ಬಂದಿವೆಯೇ" ಎಂದು ಪ್ರಶ್ನಿಸಿದ್ದಾರೆ.

"ಫ್ರೀಬೀ ಎಂಬುದರ ಬಗ್ಗೆ ಸರಿಯಾದ ವ್ಯಾಖ್ಯಾನವಿಲ್ಲ. ಒಬ್ಬ ವ್ಯಕ್ತಿಯ ಫ್ರೀಬೀ ಇನ್ನೊಬ್ಬ ವ್ಯಕ್ತಿಯ ಅಗತ್ಯ ಖರ್ಚು ಆಗಿದೆ" ಎಂದು ಹೇಳಿದರು.

ಬಡವರಿಗೆ ಉಚಿತ ರೇಷನ್(Free Ration) ನೀಡುವುದು ಹಾಗೂ ತಮಿಳುನಾಡಿನಲ್ಲಿ ಸಾಮಾನ್ಯ ಪದ್ಧತಿಯಾಗಿರುವ ಟಿವಿಯಂತಹ ಉಚಿತ ವಸ್ತುಗಳನ್ನು ನೀಡುವುದನ್ನು ಒಂದೇ ರೀತಿ ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು "ಇವುಗಳ ನಡುವಿನ ವ್ಯತ್ಯಾಸವನ್ನು ನಿರ್ಧರಿಸಲು ಸುಪ್ರೀಂ ಕೊರ್ಟ್, ಟಿವಿ ನಿರೂಪಕರು ಅಥವಾ ವಿತ್ತ ಆಯೋಗ ಸರಿಯಾದ ಪ್ರಾಧಿಕಾರವಲ್ಲ ಎಂಬುದು ನನ್ನ ಭಾವನೆ. ತಮಗೆ ಅದು ಇಷ್ಟವೇ ಅಥವಾ ಇಷ್ಟವಿಲ್ಲವೇ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ. ಇದರಲ್ಲಿ ನ್ಯಾಯಾಲಯದ ಪಾತ್ರವೇನೆಂದು ನನಗೆ ಅರ್ಥವಾಗುತ್ತಿಲ್ಲ" ಎಂದರು.

ಪ್ರಧಾನಿ ಇತ್ತೀಚೆಗೆ ಈ ಉಚಿತ ವಸ್ತುಗಳ ನೀಡಿಕೆಯನ್ನು ರೇವ್ಡಿ ಸಂಸ್ಕೃತಿ(Rewdi Culture) ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು "ಉತ್ತರ ಪ್ರದೇಶದ ಬಿಜೆಪಿ ಸರಕಾರ ಇತ್ತೀಚೆಗೆ ಉಚಿತ ಬಸ್ ಸವಾರಿಗಳನ್ನು ಘೋಷಿಸಿದೆ. ಈ ಕುರಿತು ಪ್ರಧಾನಿಯ ಅಭಿಪ್ರಾಯ ಸಕಾರಾತ್ಮಕ ಅಥವಾ ನಕಾರಾತ್ಮಕವೇ? ತಮಿಳುನಾಡಿನಲ್ಲಿ ನಮ್ಮ ಹಿಂದಿನ ಸರಕಾರ ನಡೆಸಿದ್ದ ಎಐಎಡಿಎಂಕೆ( ಬಿಜೆಪಿ ಮಿತ್ರ ಪಕ್ಷ)  ಸ್ಕೂಟರ್‍ಗಳನ್ನು ಅರ್ಧ ಬೆಲೆಗೆ ಒಂದು ಲಕ್ಷ ಮಹಿಳೆಯರಿಗೆ ನೀಡಲು ನಿರ್ಧರಿಸಿತ್ತು ಹಾಗೂ ಆ ಯೋಜನೆಯನ್ನು ಉದ್ಘಾಟಿಸಲು ಪ್ರಧಾನಿ ಬಂದಿದ್ದರು.  ಆಗ ಅವರ ಅಭಿಪ್ರಾಯವೇನಾಗಿತ್ತು. ತನಗೊಂದು ಕಾನೂನು ಬೇರೆಯವರಿಗೊಂದು ಕಾನೂನು ಸರಿಯಲ್ಲ. ಅವರು ನೀಡುತ್ತಾರೆ ಹಾಗೂ ಯಾರೂ ಅದನ್ನು ಪ್ರಶ್ನಿಸುವಂತಿಲ್ಲ, ಏಕೆಂದರೆ ಅದು ನೇರವಾಗಿ ದೇವರ ಕೈಯ್ಯಿಂದ ಬರುತ್ತಿದೆ. ಆದರೆ ಬೇರೆಯವರು ಕೊಟ್ಟರೆ, ಸರಿಯಲ್ಲ ಅದು ಕೆಟ್ಟ ಫ್ರೀಬೀ ಅನ್ನುತ್ತಾರೆ,'' ಎಂದು ತ್ಯಾಗರಾಜನ್ ಹೇಳಿದರು.

ಮೊನ್ನೆಯಷ್ಟೇ ಚಾನೆಲ್‌ ಒಂದರಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ನಿರೂಪಕರೋರ್ವರನ್ನು ತರಾಟೆಗೆ ತೆಗೆದುಕೊಂಡಿದ್ದ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News