ಬಿಲ್ಕಿಸ್‌ ಬಾನು ಆರೋಪಿಗಳ ಬಿಡುಗಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಿರ್ಭಯಾ ತಾಯಿ

Update: 2022-08-20 15:20 GMT
Photo: Indiatoday/Twitter

ಹೊಸದಿಲ್ಲಿ: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಮಗು ಸೇರಿದಂತೆ 14 ಮಂದಿಯನ್ನು ಕೊಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಎಲ್ಲಾ 11 ಅಪರಾಧಿಗಳನ್ನು ಅಲ್ಲಿನ ಸರ್ಕಾರವು ಕ್ಷಮಾದಾನ ನೀತಿಯ ಭಾಗವಾಗಿ ಆಗಸ್ಟ್ 15 ರಂದು ಬಿಡುಗಡೆ ಮಾಡಿರುವುದನ್ನು ನಿರ್ಭಯಾ ತಾಯಿ ಟೀಕಿಸಿದ್ದಾರೆ.

ಅತ್ಯಾಚಾರಿಗಳನ್ನು ಬೆಂಬಲಿಸಿ ಬಿಜೆಪಿ ಶಾಸಕರು ಮಾಡಿದ ಅಸಂಬದ್ಧ ಹೇಳಿಕೆಗಳ ಬಗ್ಗೆ ಮಾತನಾಡಿದ ನಿರ್ಭಯಾ ತಾಯಿ ಆಶಾದೇವಿ, ʼಇದು ಕೊಳಕು ಮನಸ್ಥಿತಿ. ಇದನ್ನು ನಾನು ಬೆಂಬಲಿಸುವುದಿಲ್ಲ. ಅತ್ಯಾಚಾರಿಗಳಿಗೆ ಹೂಮಾಲೆ ಹಾಕಿ ಸ್ವಾಗತಿಸುವುದು ಕಂಡಾಗ ರಕ್ತ ಕುದಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Indiatoday.in ಜೊತೆಗೆ ಮಾತನಾಡಿದ ಆಶಾದೇವಿ, “ತಪ್ಪಿತಸ್ಥ ಕೈದಿಗಳು ಬ್ರಾಹ್ಮಣರು, ಉತ್ತಮ ಸಂಸ್ಕಾರವಂತರಾದರೆ ಅವರು ಏಕೆ ಅತ್ಯಾಚಾರ ಮಾಡಿದರು? ಮೂರು ವರ್ಷದ ಬಾಲಕಿಯೊಂದಿಗೆ 14 ಜನರನ್ನು ಏಕೆ ಕೊಂದರು, ಈ ಅಪರಾಧಿಗಳು ಬ್ರಾಹ್ಮಣರಾಗಿದ್ದರೆ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿದ್ದರೆ, ಅವರು ಜೈಲಿನಲ್ಲಿ ಏಕೆ ಶಿಕ್ಷೆ ಅನುಭವಿಸುತ್ತಿದ್ದರು?” ಎಂದು ಪ್ರಶ್ನಿಸಿದ್ದಾರೆ.

 ‘‘ಅಪರಾಧಿಗಳ ಬಿಡುಗಡೆಯ ಸಂದರ್ಭದಲ್ಲಿ ಇಂದು ಅವರನ್ನು ಹೂ, ಹಾರ, ಸಿಹಿ ತಿನ್ನಿಸಿ ಸ್ವಾಗತಿಸುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಬಿಜೆಪಿ ಶಾಸಕರು ಆರೋಪಿಗಳನ್ನು ಬ್ರಾಹ್ಮಣರೆಂದು ಕರೆಯುವ ಮೂಲಕ ಅವರನ್ನು ಬೆಂಬಲಿಸುವುದು ಅವರ ಮಹಿಳೆಯರ ಬಗ್ಗೆ ಅವರ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಹೇಗೆಯೂ ಸ್ವೀಕರಿಸಲಾಗುವುದಿಲ್ಲ. ” ಎಂದು ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2002 ರ ಗುಜರಾತ್‌ ಗಲಭೆಯ ಸಮಯದಲ್ಲಿ, ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು, ಅವರ ಮೂರು ವರ್ಷದ ಮಗಳು ಮತ್ತು ಇತರ 14 ಕುಟುಂಬ ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಅಪರಾಧಿಗಳಿಗೆ ಆಗಸ್ಟ್‌ 15ರಂದು  ಕ್ಷಮಾದಾನ ನೀಡಿ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದೆ. 

ಗುಜರಾತ್ ಸರ್ಕಾರದಿಂದ ಕ್ಷಮಾದಾನ ನೀತಿಯಡಿ ಬಿಡುಗಡೆಯಾದ ಎಲ್ಲಾ 11 ಅಪರಾಧಿಗಳನ್ನು ಅಲ್ಲಿನ ಬಿಜೆಪಿ ಶಾಸಕರು 'ಸಂಸ್ಕಾರವಂತ ಬ್ರಾಹ್ಮಣರು' ಎಂದು ಕರೆಯುವ ಮೂಲಕ ಬೆಂಬಲಿಸಿದ್ದಾರೆ. ಗೋದ್ರಾದ ಬಿಜೆಪಿ ಶಾಸಕ ಸಿಕೆ ರೌಲ್ಜಿ ಬಿಲ್ಕಿಸ್ ಬಾನೋ ಅಪರಾಧಿಗಳ ಬಿಡುಗಡೆಯನ್ನು ಸ್ವಾಗತಿಸಿದ್ದು,  ಅವರು ಬ್ರಾಹ್ಮಣ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಗುಜರಾತ್ ಸರ್ಕಾರದ ಈ ಅಸಂಬದ್ಧ ನಿರ್ಧಾರವನ್ನು ಪ್ರತಿಪಕ್ಷಗಳು ಮಾತ್ರವಲ್ಲದೆ, ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಇದನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ದೇಶದ ಮಹಿಳೆಯರೊಂದಿಗೆ ಅಲ್ಲ ಅವರ ಅತ್ಯಾಚಾರಿಗಳೊಂದಿಗೆ ಇದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News