ಪತಂಜಲಿಯ ತುಪ್ಪ ಕಲಬೆರಕೆಯಿಂದ ಕೂಡಿದೆ, ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ: ಎಫ್ಎಸ್‌ಡಿಡಿ
ಹೊಸದಿಲ್ಲಿ,ಆ.20: ಹರಿದ್ವಾರದಲ್ಲಿರುವ ಯೋಗಗುರು ರಾಮದೇವ್ ಅವರ ಪತಂಜಲಿ ಕಂಪನಿಯು ತಯಾರಿಸುತ್ತಿರುವ ತುಪ್ಪವು ಆಹಾರ ಸುರಕ್ಷತೆ ಮತ್ತು ಔಷಧಿಗಳ ಇಲಾಖೆ (ಎಫ್ಎಸ್ಡಿಡಿ) ನಡೆಸಿರುವ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಪತಂಜಲಿಯ ತುಪ್ಪದ ಸ್ಯಾಂಪಲ್ನಲ್ಲಿ ಕಲಬೆರಕೆಯಿರುವುದು ಮತ್ತು ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಎನ್ನುವುದು ರಾಜ್ಯ ಮತ್ತು ಕೇಂದ್ರೀಯ ಪ್ರಯೋಗಾಲಯಗಳು ನಡೆಸಿರುವ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ ಎಂದು Indiaaheadnews.com ವರಿದ ಮಾಡಿದೆ.
ಪತಂಜಲಿಯ ‘ಆಕಳ ತುಪ್ಪ’ದ ಸ್ಯಾಂಪಲ್ ಅನ್ನು ಉತ್ತರಾಖಂಡದ ತೆಹ್ರಿಯಲ್ಲಿನ ಅಂಗಡಿಯೊಂದರಿಂದ ಪಡೆದುಕೊಂಡು ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಅದರಲ್ಲಿ ಕಲಬೆರಕೆ ಪತ್ತೆಯಾಗಿದೆ ಮತ್ತು ಅಗತ್ಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲಗೊಂಡಿದೆ ಎನ್ನಲಾಗಿದೆ.
ಈ ಹಿಂದೆ 2021ರಲ್ಲಿ ಪತಂಜಲಿ ತುಪ್ಪವು ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಎಫ್ಎಸ್ಡಿಡಿ ಪತ್ತೆ ಹಚ್ಚಿತ್ತು. ಆದರೆ ಪರೀಕ್ಷಾ ವರದಿಯನ್ನು ಒಪ್ಪಿಕೊಳ್ಳಲು ರಾಮದೇವರ ಕಂಪನಿಯು ನಿರಾಕರಿಸಿತ್ತು ಮತ್ತು ಅದು ತಪ್ಪಾಗಿದೆ ಎಂದು ಪ್ರತಿಪಾದಿಸಿತ್ತು. ಬಳಿಕ ಸ್ಯಾಂಪಲ್ ಅನ್ನು ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಮತ್ತು ಅಲ್ಲಿಯೂ ಅದೇ ಫಲಿತಾಂಶ ಬಂದಿತ್ತು. ಈಗ ಪತಂಜಲಿಯ ತುಪ್ಪವು ಕೇಂದ್ರೀಯ ಪ್ರಯೋಗಶಾಲೆಯ ಪರೀಕ್ಷೆಯಲ್ಲಿಯೂ ವಿಫಲಗೊಂಡಿರುವುದರಿಂದ ಎಫ್ಎಸ್ಡಿಡಿ ತೆಹ್ರಿ ಜಿಲ್ಲೆಯ ಎಸ್ಡಿಎಂ ನ್ಯಾಯಾಲಯದಲ್ಲಿ ಪತಂಜಲಿ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಿದೆ.
ಪ್ರಯೋಗಾಲಯದ ವರದಿಯಂತೆ ಪತಂಜಲಿ ತುಪ್ಪ ಕಲಬೆರಕೆಯಿಂದ ಕೂಡಿದೆ,ಅದು ಮಾನದಂಡಗಳಿಗೆ ಅನುಗುಣವಾಗಿಲ್ಲ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆಯ ನಿಯೋಜಿತ ಅಧಿಕಾರಿ ಎಂ.ಎನ್.ಜೋಶಿ ತಿಳಿಸಿದರು.
ಚಾರ್ ಧಾಮ್ ಯಾತ್ರೆಯ ಸಂದರ್ಭದಲ್ಲಿ ಚಂಬಾ-ಧರಾಸು ಹೆದ್ದಾರಿಯ ಸೇಲು ಪಾನಿಯಲ್ಲಿನ ಹೋಟೆಲ್ವೊಂದರಿಂದ ಪತಂಜಲಿಯ ಅಕ್ಕಿಯ ಸ್ಯಾಂಪಲ್ನ್ನೂ ಸಂಗ್ರಹಿಸಲಾಗಿತ್ತು ಮತ್ತು ಅದರಲ್ಲಿ ಭಾರೀ ಪ್ರಮಾಣದಲ್ಲಿ ಕೀಟನಾಶಕವಿರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದೂ ಅವರು ಹೇಳಿದರು.