×
Ad

26/11ರ ಮಾದರಿಯಲ್ಲಿ ಭಯೋತ್ಪಾದಕ ದಾಳಿ: ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ

Update: 2022-08-20 22:32 IST
PHOTO ; INDUSTAN TIMES 

ಮುಂಬೈ,ಆ.20: ಮುಂಬೈನಲ್ಲಿ 2008,ನ.26ರಂದು ನಡೆದಿದ್ದ ಸರಣಿ ದಾಳಿಗಳ ಮಾದರಿಯಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬೆದರಿಕೆ ಸಂದೇಶಗಳು ಶನಿವಾರ ಮುಂಬೈ ಪೊಲೀಸರಿಗೆ ಬಂದಿವೆ.

ಮುಂಬೈ ಸಂಚಾರ ಪೊಲೀಸರ ಸಹಾಯವಾಣಿಗೆ ಸಂದೇಶಗಳನ್ನು ರವಾನಿಸಿರುವ ವ್ಯಕ್ತಿಯು,26/11ರ ದಾಳಿಯ ನೆನಪುಗಳನ್ನು ಮರುಕಳಿಸುವ ದಾಳಿಯನ್ನು ಶೀಘ್ರವೇ ನಗರದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾನೆ.

ಮೇಲ್ನೋಟಕ್ಕೆ,ಬೆದರಿಕೆ ಸಂದೇಶಗಳು ಪಾಕಿಸ್ತಾನ ಕೋಡ್ನೊಂದಿನ ಸಂಖ್ಯೆಯಿಂದ ಬಂದಿರುವಂತೆ ಕಂಡು ಬಂದಿದೆ ಎಂದು ಹೇಳಿದ ಮುಂಬೈ ಪೊಲೀಸ್ ಆಯುಕ್ತ ವಿವೇಕ ಫನ್ಸಾಳ್ಕರ್ ಅವರು,‘ನಾವು ಈ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆದರಿಕೆ ಸಂದೇಶಗಳ ತನಿಖೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕರಾವಳಿ ಭದ್ರತೆಯ ಬಗ್ಗೆ ನಾವು ಕಟ್ಟೆಚ್ಚರ ವಹಿಸಿದ್ದೇವೆ ಮತ್ತು ತಟರಕ್ಷಣಾ ಪಡೆಯೊಂದಿಗೆ ಸಂಪರ್ಕದಲ್ಲಿದ್ದೇವೆ ’ಎಂದು ತಿಳಿಸಿದರು.

2008,ನ.26ರಂದು ಮುಂಬೈ ನಗರದ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ನಗರವನ್ನು ಪ್ರವೇಶಿಸಿ ಕೊಲಾಬಾದ ಮಚ್ಛಿಮಾರ್ ನಗರದಲ್ಲಿ ಇಳಿದಿದ್ದರು.

ದಾಳಿಯ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರಾದರೂ ಸಂದೇಶಗಳನ್ನು ರವಾನಿಸಿರುವ ವ್ಯಕ್ತಿಯ ಪತ್ತೆಗಾಗಿ ತನಿಖೆಯನ್ನು ಆರಂಭಿಸಿದ್ದಾರೆ.

ಸಂದೇಶಗಳನ್ನು ರವಾನಿಸಿರುವ ವ್ಯಕ್ತಿಯು ತಾನು ಪಾಕಿಸ್ತಾನ ಮೂಲದವನಾಗಿದ್ದು,ದಾಳಿಯನ್ನು ನಡೆಸಲು ತನಗೆ ನೆರವಾಗುವ ಕೆಲವು ವ್ಯಕ್ತಿಗಳು ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸರಕಾರವು ಬೆದರಿಕೆ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ದೇವೇಂದ್ರ ಫಡ್ನವೀಸ್ ಅವರು,ಈ ವಿಷಯದ ಕುರಿತು ತನಿಖೆಗಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗಳಿಗೆ ಸೂಚಿಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News