ʼಸರಕಾರಕ್ಕಿಂತ ಸಂಘಟನೆ ದೊಡ್ಡದುʼ ಎಂದು ಹೇಳಿ ಕುತೂಹಲ ಮೂಡಿಸಿದ ಉತ್ತರಪ್ರದೇಶ ಉಪಮುಖ್ಯಮಂತ್ರಿ
ಲಕ್ನೋ: ಉತ್ತರ ಪ್ರದೇಶ(Uttar Pradesh) ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ಹೊಸ ನೇಮಕಾತಿ ನಡೆಯಬಹುದೆನ್ನುವ ಊಹಾಪೋಹದ ನಡುವೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Mourya) ಅವರು ನೀಡಿದ ಹೇಳಿಕೆಯೊಂದು ಕುತೂಹಲ ಕೆರಳಿಸಿದೆ.
"ಸಂಘಟನ್ ಸರ್ಕಾರ್ ಸೆ ಬರ್ಹಾ ಹೈ" (ಸರಕಾರಕ್ಕಿಂತ ಸಂಘಟನೆ(ಪಕ್ಷ) ದೊಡ್ಡದು" ಎಂದು ಮೌರ್ಯ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯಿಂದ ಸಚಿವ ಸ್ವತಂತ್ರ ದೇವ್ ಸಿಂಗ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮೌರ್ಯ ಅವರು ರಾಜ್ಯದ ಪ್ರಭಾವಿ ಒಬಿಸಿ(OBC) ನಾಯಕರಾಗಿದ್ದು 2017 ವಿಧಾನಸಭಾ ಚುನಾವಣೆ ಸಂದರ್ಭ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಅವರನ್ನು ಇತ್ತೀಚೆಗೆ ಸ್ವತಂತ್ರ ದೇವ್ ಸಿಂಗ್ ಅವರ ಬದಲು ವಿಧಾನಪರಿಷತ್ತಿನಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷ ನಾಯಕರನ್ನಾಗಿಯೂ ನೇಮಕಗೊಳಿಸಲಾಗಿತ್ತು.
ತಮ್ಮ ಟ್ವೀಟ್ ಕುರಿತು ಹೆಚ್ಚಿನ ಪ್ರತಿಕ್ರಿಯೆಯನ್ನು ಮೌರ್ಯ ಇಲ್ಲಿಯ ತನಕ ನೀಡಿಲ್ಲ.