×
Ad

2018ರ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಶಾನವಾಝ್ ಹುಸೇನ್ ವಿರುದ್ಧ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

Update: 2022-08-22 13:46 IST
Photo:PTI

ಹೊಸದಿಲ್ಲಿ,ಆ.22: ಅತ್ಯಾಚಾರದ ಆರೋಪವನ್ನು ಹೊರಿಸಿ ಮಹಿಳೆಯೋರ್ವರು ಸಲ್ಲಿಸಿರುವ ದೂರಿನ ಮೇರೆಗೆ ಬಿಜೆಪಿ ನಾಯಕ ಶಾನವಾಜ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಾತಿಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಡೆಯಾಜ್ಞೆಯನ್ನು ನೀಡಿದೆ.

ಹುಸೇನ್ ಅರ್ಜಿಯ ಮೇರೆಗೆ ನೋಟಿಸ್ ಹೊರಡಿಸಿದ ನ್ಯಾ.ಯು.ಯು.ಲಲಿತ್ ನೇತೃತ್ವದ ಪೀಠವು ದಿಲ್ಲಿ ಸರಕಾರದಿಂದ ಸೇರಿದಂತೆ ಉತ್ತರಗಳನ್ನು ಕೋರಿದೆ. ಪ್ರಕರಣದ ಮುಂದಿನ ವಿಚಾರಣೆಯು ಸೆಪ್ಟಂಬರ್ ಮೂರನೇ ವಾರದಲ್ಲಿ ನಡೆಯಲಿದೆ.

ತನ್ನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ಆ.17ರಂದು ವಜಾಗೊಳಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯವು 2018ರ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಹೇಳಿತ್ತು ಮತ್ತು ತಾನು ಈ ಹಿಂದೆ ಆದೇಶದ ಕಾರ್ಯಾಚರಣೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.

2018ರಲ್ಲಿ ದಿಲ್ಲಿಯ ಮಹಿಳೆಯೋರ್ವರು ಅತ್ಯಾಚಾರದ ಆರೋಪದಲ್ಲಿ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಕೆಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ 2018,ಜು.7ರಂದು ದಿಲ್ಲಿ ಪೊಲೀಸರಿಗೆ ಆದೇಶಿಸಿತ್ತು. ಹುಸೇನ್ ಇದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,ಅವರ ಅರ್ಜಿಯನ್ನು ಅದು ವಜಾಗೊಳಿಸಿತ್ತು. ಬಳಿಕ ಹುಸೇನ್ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News