ಅಪರಾಧಿಗಳು ಪೆರೋಲ್‍ನಲ್ಲಿ ಬಿಡುಗಡೆಯಾಗಿದ್ದಾಗ ಸಾಕ್ಷಿಗಳಿಗೆ ಹಲವು ಬಾರಿ ಬೆದರಿಸಿದ್ದರೆಂಬ ಅಂಶ ಬಹಿರಂಗ

Update: 2022-08-22 09:10 GMT

ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದಲ್ಲಿ ಗುಜರಾತ್ ಸರಕಾರದ ಆದೇಶದಂತೆ ಬಿಡುಗಡೆಗೊಂಡಿರುವ ಬಿಲ್ಕಿಸ್ ಬಾನು(Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳು ಈ ಹಿಂದೆ ಆಗಾಗ ಪೆರೋಲ್ ಮೇಲೆ ಬಿಡುಗಡೆಗೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ಅವರಲ್ಲಿ ಕನಿಷ್ಠ ನಾಲ್ಕು ಮಂದಿ ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಅಪರಾಧಿಗಳು ಈ ಹಿಂದೆ ʼಗೃಹ ಪ್ರವೇಶ ಸಮಾರಂಭ,ʼ ʼಪುತ್ರನ ಮದುವೆʼ ಎಂದೆಲ್ಲಾ ಕಾರಣಗಳನ್ನು ನೀಡಿ ಪೆರೋಲ್‍ಗೆ(parole) ಮನವಿ ಸಲ್ಲಿಸುತ್ತಿದ್ದರು. ಇವರಿಗೆ ಒಂದು ತಿಂಗಳು ಅವಧಿ ತನಕ ಹಲವು ಬಾರಿ ಪೆರೋಲ್ ಅದಾಗಲೇ ಒದಗಿಸಲಾಗಿದ್ದ ಕಾರಣ ನೀಡಿ ನ್ಯಾಯಾಲಯಗಳು ಹಲವು ಬಾರಿ ಅವರ ಪೆರೋಲ್ ಮನವಿಯನ್ನು ತಿರಸ್ಕರಿಸಿದ್ದವು. ಆದರೆ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದ ಸಂದರ್ಭ ಅವರು ಕೆಲ ಸಾಕ್ಷ್ಯಗಳಿಗೆ ಬೆದರಿಕೆಯೊಡ್ಡಿದ್ದರು ಹಾಗೂ ಕೊಲೆ ಬೆದರಿಕೆಯನ್ನೂ ಹಾಕಿದ್ದರೆನ್ನಲಾಗಿದೆ.

ಗುಜರಾತ್‍ನಲ್ಲಿ 2002 ರಲ್ಲಿ ನಡೆದ ಗಲಭೆಗಳ ಸಂದರ್ಭ(Gujarat communal violence-2022) ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಾಕ್ಷಿಗಳು ಸದಾ ಭಯದಿಂದಲೇ ಬದುಕುತ್ತಿದ್ದಾರೆ, ಎಂದು ಸಾಕ್ಷಿಗಳಲ್ಲೊಬ್ಬರಾಗಿರುವ ಅಬ್ದುಲ್ ರಝಾಖ್ ಮನ್ಸೂರಿ ಹೇಳುತ್ತಾರೆ. 2021 ರಲ್ಲಿ ಅವರು ಗುಜರಾತ್‍ನ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರಿಗೆ ಪತ್ರ ಬರೆದು ಈ ಅಪರಾಧಿಗಳು ಪೆರೋಲ್ ಅವಧಿಯನ್ನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ತಮ್ಮ ಉದ್ಮಗಳನ್ನು ಮುಂದುವರಿಸಿಕೊಂಡು ಹೋಗಲು, ಬಂಗಲೆಗಳನ್ನು ನಿರ್ಮಿಸಲು ಮತ್ತು ಸಾಕ್ಷಿಗಳಿಗೆ ಬೆದರಿಸಲು ಬಳಸುತ್ತಿದ್ದರು ಎಂದು ಆರೋಪಿಸಿದ್ದರು.

ಮನ್ಸೂರಿ ಅವರು ಅಪರಾಧಿಗಳಲ್ಲೊಬ್ಬನಾದ ಸೈಲೇಶ್ ಚಿಮ್ಮನ್‍ಲಾಲ್ ಭಟ್ಟ್ ಎಂಬಾತನ ವಿರುದ್ಧ ದಹೋಡ್ ಪೊಲೀಸರಿಗೆ ದೂರು ದಾಖಲಿಸಿ ಆತ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಿದ್ದರು. ಈತ ಬಿಜೆಪಿ ಕಾರ್ಯಕ್ರಮವೊಂದರಲ್ಲೂ ಭಾಗವಹಿಸಿದ್ದನೆನ್ನಲಾಗಿದೆ.

ತನಗೆ ಈ ಹಿಂದೆ ಒದಗಿಸಲಾಗಿದ್ದ ಮೀಸಲು ಪೊಲೀಸ್ ಪಡೆ  ಭದ್ರತೆಯನ್ನೂ ವಾಪಸ್ ಪಡೆದಿರುವುದರಿಂದ ಭಯದಿಂದಲೇ ಬದುಕುವಂತಾಗಿದೆ ಎಂದು ಆತ ಹೇಳಿದ್ದಾರೆ.

ಆದರೆ ತಮಗೆ ಪತ್ರದ ಬಗ್ಗೆ ತಿಳಿದಿಲ್ಲ ಹಾಗೂ ಆರೋಪಿಗಳು ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಗ್ಗೆ ತಿಳಿದಿಲ್ಲ ಎಂದು ಗೃಹ ಸಚಿವರು ಹೇಳಿದ್ದರು.

ಇನ್ನೊಬ್ಬ ಸಾಕ್ಷಿ ಫರೋಝ್ ಘಂಚಿ ಜೂನ್ 23, 2020 ರಂದು ಪಂಚಮಹಲ್ ವಲಯ ಐಜಿ ಅವರಿಗೆ ಪತ್ರ ಬರೆದು  ಅಪರಾಧಿಗಳು ಸುಳ್ಳು ಕಾರಣಗಳನ್ನು ನೀಡಿ ಜೈಲಿಗಿಂತ ಹೆಚ್ಚಾಗಿ ತಮ್ಮ ಊರುಗಳಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮನ್ಸೂರಿ ಮತ್ತು ಘಂಚಿ ಅವರಂತೆ ಇತರ ಸಾಕ್ಷಿಗಳೂ ದೂರು ದಾಖಲಿಸಿದ್ದರೂ ಒಂದು ಎಫ್‍ಐಆರ್ ಮಾತ್ರ ದಾಖಲಿಸಲಾಗಿತ್ತು.

ಜುಲೈ 6, 2020 ರಂದು ಅಪರಾಧಿಗಳ ಪೈಕಿ ಇಬ್ಬರ ವಿರುದ್ಧ  ಸಾಕ್ಷಿ ಸಬೇರಬೆನ್ ಪಟೇಲ್ ಎಂಬವರು ನೀದಿದ ದೂರಿನ ಆಧಾರದಲ್ಲಿ ಮಹಿಳೆಗೆ ಬೆದರಿಸಿದ ಪ್ರಕರಣ ದಾಖಲಿಸಲಾಗಿತ್ತು.

ಆದರೆ ಅಪರಾಧಿಗಳ ಪೈಕಿ ಒಬ್ಬಾತ ರಮೇಶ್ ಚಂದನ, ತಮ್ಮ ವಿರುದ್ಧದ ಆರೋಪ ನಿರಾಕರಿಸುತ್ತಾನೆ, ಸಾಕ್ಷಿಗಳು ನಮ್ಮನ್ನು ಒಂದು ಬೆದರಿಕೆ ಎಂದು ಪರಿಗಣಿಸಿದರೆ ನಾವೇನು ಮಾಡಲು ಸಾಧ್ಯ ಎಂದು ಆತ ಪ್ರಶ್ನಿಸುತ್ತಾನೆ.

ಘಟನೆ ನಡೆದ ಸಂದರ್ಭ ಬಿಲ್ಕಿಸ್ ಬಾನು ಮನೆಗೆ ಈತ ತೆರಳಿದ್ದ ಕಾರು ಆಗಿನ ಗ್ರಾಮ ಸರಪಂಚೆಯಾಗಿದ್ದ ಆತನ ಪತ್ನಿಯ ಹೆಸರಿನಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News