ಕೊಲೆಯತ್ನ ಪ್ರಕರಣದ ದೂರುದಾರನನ್ನೇ ಆರೋಪಿಯೆಂದು ಹೆಸರಿಸಿದ ನಂತರ ತನಿಖೆಯನ್ನೇ ಪ್ರಶ್ನಿಸಿದ ನ್ಯಾಯಾಲಯ

Update: 2022-08-22 11:36 GMT

 ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ(North east Delhi) ಫೆಬ್ರವರಿ 2020 ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸಾಜಿದ್ ಎಂಬಾತನನ್ನೇ ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿ ಎಂದು ದಿಲ್ಲಿ ಪೊಲೀಸರು ಹೆಸರಿಸಿದ ನಂತರ ಈ  ಹಿಂಸಾಚಾರ ಕುರಿತ ತನಿಖೆಯನ್ನು ದಿಲ್ಲಿಯ ನ್ಯಾಯಾಲಯ ಪ್ರಶ್ನಿಸಿದೆ.

ಈ ನಿರ್ದಿಷ್ಟ ಕೊಲೆಯತ್ನ ಪ್ರಕರಣದಲ್ಲಿ ಆರು ಮಂದಿ ಸಾಜಿದ್ ಮೇಲೆ ದಾಳಿ ನಡೆಸಿದ ಕುರಿತಂತೆ ತನಿಖೆ ಕೇಂದ್ರೀಕೃತಗೊಂಡಿತ್ತು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಆಗಸ್ಟ್ 18ರಂದು ಹೊರಡಿಸಿದ ಆದೇಶವೊಂದರಲ್ಲಿ  ಹೇಳಿದ್ದರು. ಆದರೆ ಈ ಆರು ಮಂದಿಯನ್ನೂ ಈ ಪ್ರಕರಣದಲ್ಲಿ ದೋಷಮುಕ್ತಗೊಳಿಸಲಾಗಿದೆ.

ಸಾಜಿದ್ ಪ್ರಕಾರ ಫೆಬ್ರವರಿ 25, 2020 ರಂದು ಮೇಲೆ ತಿಳಿಸಿದ ಆರು ಮಂದಿಯನ್ನೊಳಗೊಂಡ ಗುಂಪಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿದ್ದ ವೇಳೆ ಆತನಿಗೆ ಗುಂಡೇಟು ತಗಲಿತ್ತು. ವಿಚಾರಣೆ ವೇಳೆ ಆತನಿಗೆ ಗಾಯವುಂಟಾಗಿರುವ ವಿಚಾರ ಉಲ್ಲೇಖಗೊಂಡು ಆತ ಕೂಡ ಉದ್ರಿಕ್ತ ಗುಂಪಿನ ಭಾಗವಾಗಿದ್ದ ಎಂದು ತಿಳಿಯಲಾಗಿತ್ತು.

ಈ ಪ್ರಕರಣದಲ್ಲಿ ಸಾಜಿದ್ ಹತ್ಯೆಗೆ ಯತ್ನಕ್ಕಾಗಿ ಆರು ಮಂದಿಯನ್ನು ಹೆಸರಿಸಲಾಗಿದ್ದರೆ ಆತನನ್ನೂ ಆರೋಪಿಯೆಂದು ಪ್ರಾಸಿಕ್ಯೂಶನ್ ಗುರುತಿಸಿರುವಾಗ ಈ ತನಿಖೆಯನ್ನು ಪ್ರಶ್ನಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಸಾಜಿದ್ ಪ್ರಾಥಮಿಕ ಸಾಕ್ಷಿಯಾಗಿರುವಾಗ ಆರು ಮಂದಿಯ ಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿಯಾಗಿಯೂ ಆತನನ್ನು ಹೆಸರಿಸಲಾಗಿದೆ, ಆತನಿಗೆ ಹೇಗೆ ಗುಂಡೇಟು ತಗಲಿದೆ ಎಂದು ಸಾಬೀತಾಗುವವರೆಗೆ ಆತನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಾಗುವುದಿಲ್ಲ. ಆರೋಪಿಯಾಗಿರುವ ಒಂದು ಪ್ರಕರಣದಲ್ಲಿ ಆತನೇ ಸಾಕ್ಷಿಯಾಗಿ ಹಾಜರಾಗುವುದು ಹೇಗೆ ಸಾಧ್ಯ,'' ಎಂದು ನ್ಯಾಯಾಲಯ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News