ಅಮಿತ್‌ ಶಾ ಚಪ್ಪಲಿಯನ್ನು ಕೈಯಲ್ಲಿ ಎತ್ತಿಕೊಂಡು ಬರುತ್ತಿದ್ದ ತೆಲಂಗಾಣದ ಬಿಜೆಪಿ ಮುಖಂಡನ ವೀಡಿಯೊ ವೈರಲ್

Update: 2022-08-22 14:53 GMT
Photo: twitter 

ಹೈದರಾಬಾದ್:‌ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರ ಚಪ್ಪಲಿಯನ್ನು ತಮ್ಮ ಕೈಯಲ್ಲಿ ಎತ್ತಿ ತರುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ತೆಲಂಗಾಣ ಸಚಿವ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮರಾವ್ ಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಈ ಕುರಿತು  ಟ್ವೀಟ್‌ ಮಾಡಿದ ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿ, ಗುಜರಾತಿನ ನಾಯಕರ ಚಪ್ಪಲಿ ತೆಗೆದು ಕೊಡುವುದೇ ತೆಲಂಗಾಣದ ಸ್ವಾಭಿಮಾನವೇ?  ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಜನರು "ಗುಜರಾತ್ ಗುಲಾಮರನ್ನು" ವೀಕ್ಷಿಸುತ್ತಿದ್ದಾರೆ ಮತ್ತು ತೆಲಂಗಾಣದ "ಸ್ವಾಭಿಮಾನ" ವನ್ನು ಅವಹೇಳನ ಮಾಡುವ ಯಾವುದೇ ಪ್ರಯತ್ನವನ್ನು ಹಿಮ್ಮೆಟ್ಟಿಸುತ್ತಾರೆ ಎಂದು ಹೇಳಿದ್ದಾರೆ.

NDTV ಪ್ರಕಾರ, ವೈರಲ್‌ ವಿಡಿಯೋವನ್ನು ಸಿಕಂದರಾಬಾದ್‌ನ ಉಜ್ಜೈನಿ ಮಹಾಕಾಳಿ ಮಠ ದೇವಸ್ಥಾನದ ಹೊರಗೆ ಚಿತ್ರೀಕರಿಸಲಾಗಿದೆ. ವಿಡಿಯೋ ಕುರಿತು ಟಿಆರ್‌ಎಸ್ ದಾಳಿಗೆ ಬಿಜೆಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾ ಅವರ ತೆಲಂಗಾಣ ಪ್ರವಾಸ ಕೈಗೊಂಡಿದ್ದಾರೆ.

ಮಾಜಿ ಕಾಂಗ್ರೆಸ್ ನಾಯಕ ರಾಜಗೋಪಾಲ್ ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅಮಿತ್ ಶಾ, "ರಾಜಗೋಪಾಲ್ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗುವುದು ಕೆಸಿಆರ್ ಸರ್ಕಾರದ ಬೇರುಸಹಿತ ಕಿತ್ತುಹಾಕುವುದರ ಪ್ರಾರಂಭವಾಗಿದೆ. ಕೆಸಿಆರ್ ಸರ್ಕಾರ ತೆಲಂಗಾಣ ಜನರ ನಂಬಿಕೆಗೆ ದ್ರೋಹ ಮಾಡಿದೆ. ಮಜ್ಲಿಸ್ ಭಯದಿಂದ ತೆಲಂಗಾಣ ವಿಮೋಚನಾ ದಿನವನ್ನು ಕೆಸಿಆರ್ ಸರ್ಕಾರ ಆಚರಿಸುತ್ತಿಲ್ಲ, ಅವರು ಸೆಪ್ಟೆಂಬರ್‌ನಲ್ಲಿ ತೆಲಂಗಾಣ ವಿಮೋಚನಾ ದಿನವನ್ನು ಆಚರಿಸುವುದಾಗಿ ಭರವಸೆ ನೀಡಿದರು, ಆದರೆ, ಕೆಸಿಆರ್ ಸರ್ಕಾರ ಅವರ ಭರವಸೆಯನ್ನು ಈಡೇರಿಸಲಿಲ್ಲ.” ಎಂದು ಕೆಸಿಆರ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ರಾಜ್ಯದ ರೈತರಿಗೆ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೆಸಿಆರ್ ನಿರಾಕರಿಸುತ್ತಿದ್ದಾರೆ, ರೈತರನ್ನು ವಿಮೆಯಿಂದ ದೂರವಿಡುವ ಪಾಪ ಮಾಡಿದ್ದಾರೆ, ಕೆಸಿಆರ್ ಸರ್ಕಾರ ರೈತರ ವಿರೋಧಿಯಾಗಿದೆ,'' ಎಂದು ಟೀಕಿಸಿದ್ದರು. ಕೆಸಿಆರ್ ವಂಶಾಡಳಿತ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ''ತಮ್ಮ ಸರಕಾರ ರಚನೆಯಾದರೆ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು, ಇಲ್ಲಿಯವರೆಗೆ ಮಾಡಿಲ್ಲ, ಮತ್ತೊಮ್ಮೆ ಅವರನ್ನು ಆರಿಸಿದರೆ ಕೆಸಿಆರ್ ಬದಲಿಗೆ ಕೆಟಿಆರ್ ಬರುತ್ತಾರೆ, ಆದರೆ ದಲಿತ ಸಿಎಂ ಬರುವುದಿಲ್ಲ.” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News