ದಿಲ್ಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ಮಹಾಪಂಚಾಯತ್ ನಲ್ಲಿ ಸಾವಿರಾರು ರೈತರು ಭಾಗಿ
ಹೊಸದಿಲ್ಲಿ,ಆ.22: ಪೊಲೀಸರ ಬಿಗುಭದ್ರತೆಯ ನಡುವೆಯೇ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ರೈತರು ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ದಿಲ್ಲಿಯ ಜಂತರ್ ಮಂತರ್ನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ದಿಲ್ಲಿಯ ಗಡಿಗಳಲ್ಲಿ ಹಲವಾರು ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,ರಾಜಧಾನಿಯ ವಿವಿಧೆಡೆಗಳಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು.
ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿದ್ದ ಮಹಾಪಂಚಾಯತ್ ಶಾಂತಿಯುತವಾಗಿ ನಡೆದಿದೆ. ಕೆಲವು ರೈತರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಪ್ರತಿಭಟನಾ ತಾಣವನ್ನು ತಲುಪಿದ್ದು,ಎಲ್ಲೆಡೆ ಘೋಷಣೆಗಳು ಮೊಳಗುತ್ತಿದ್ದವು. ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸೂಕ್ತ ಅನುಷ್ಠಾನ,ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ಪ್ರತಿಭಟನೆ ಸಂದರ್ಭ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಹಿಂದೆಗೆತಕ್ಕೂ ರೈತರು ಆಗ್ರಹಿಸುತ್ತಿದ್ದಾರೆ.
2021ರ ಹಿಂಸಾಚಾರ ಪ್ರಕರಣದಲ್ಲಿ ನ್ಯಾಯವನ್ನು ಕೋರಿ ಎಸ್ಕೆಎಂ ಕಳೆದ ವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಕಳೆದ ವರ್ಷದ ಅಕ್ಟೋಬರ್ನಲ್ಲಿ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತರ ಗುಂಪಿನ ಮೇಲೆ ಕೇಂದ್ರ ಸಚಿವ ಅಜಯ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ವಾಹನ ನುಗ್ಗಿಸಿದ್ದ ಪರಿಣಾಮ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.
ಮಹಾಪಂಚಾಯತ್ನಲ್ಲಿ ಪಾಲ್ಗೊಳ್ಳಲು ರವಿವಾರ ದಿಲ್ಲಿಗೆ ಆಗಮಿಸುತ್ತಿದ್ದ ಬಿಕೆಯು ನಾಯಕ ರಾಕೇಶ ಟಿಕಾಯತ್ ಅವರನ್ನು ಗಾಝಿಪುರ ಗಡಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಸೋಮವಾರ ಗಾಝಿಪುರ ಗಡಿಯಲ್ಲಿ 19 ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ತಾವು ಪ್ರತಿಭಟನಾಕಾರರನ್ನು ಬಸ್ನಲ್ಲಿ ಸಮೀಪದ ಠಾಣೆಗೆ ಕರೆದೊಯ್ದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಎಂಎಸ್ಪಿಗೆ ಕಾನೂನಿನ ಖಾತರಿ,2002ರ ವಿದ್ಯುತ್ ತಿದ್ದುಪಡಿ ಮಸೂದೆಯ ರದ್ದತಿ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಮಹಾಪಂಚಾಯತ್ ಆಗ್ರಹಿಸಿದೆ ಎಂದು ಎಸ್ಕೆಎಂ ಸದಸ್ಯ ಅಭಿಮನ್ಯು ಸಿಂಗ್ ಕೋಹರ್ ತಿಳಿಸಿದರು.
ರವಿವಾರ ರಾತ್ರಿ ಪಂಜಾಬ,ಹರ್ಯಾಣ ಮತ್ತು ಉತ್ತರ ಪ್ರದೇಶಗಳಿಂದ ಆಗಮಿಸಿದ್ದ ರೈತರನ್ನು ದಿಲ್ಲಿಯ ಗಡಿಗಳಲ್ಲಿ ತಡೆಯಲಾಗಿತ್ತು ಮತ್ತು ಜಂತರ್ ಮಂತರ್ ತಲುಪಲು ಅವರಿಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಅವರನ್ನು ಗುರುದ್ವಾರಾ ಬಾಂಗ್ಲಾ ಸಾಹಿಬ್,ರಕಬ್ಗಂಜ್ ಮತ್ತು ಮೋತಿ ಬಾಗ್ಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಲಾಗಿತ್ತು ಎಂದರು. ಪೊಲೀಸರ ಸರ್ಪಗಾವಲು ಸಿಂಘು,ತಿಕ್ರಿ ಮತ್ತು ಗಾಝಿಪುರ ಸೇರಿದಂತೆ ದಿಲ್ಲಿಯ ಗಡಿ ಪ್ರವೇಶ ಕೇಂದ್ರಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ರೈಲ್ವೆ ಹಳಿಗಳುದ್ದಕ್ಕೂ,ಬಸ್ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರ ಸರ್ಪಗಾವಲನ್ನು ಏರ್ಪಡಿಸಲಾಗಿತ್ತು. ದಿಲ್ಲಿಯನ್ನು ಪ್ರವೇಶಿಸುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿತ್ತು.