ಭಾರತದಿಂದ ಕೊಳ್ಳೆ ಹೊಡೆದಿದ್ದ ಸಾಂಸ್ಕೃತಿಕ ಕಲಾಕೃತಿಗಳನ್ನು ಹಿಂದಿರುಗಿಸಿದ ಬ್ರಿಟನ್

Update: 2022-08-22 16:35 GMT

ಲಂಡನ್, ಆ.೨೨: ಬ್ರಿಟನ್ ನ ಗ್ಲಾಸ್ಗೋದಲ್ಲಿ ಶುಕ್ರವಾರ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ   ಬ್ರಿಟಿಷರ ಆಡಳಿತದಲ್ಲಿದ್ದ ಸಂದರ್ಭ ಭಾರತದಿಂದ ಕೊಳ್ಳೆಹೊಡೆದಿದ್ದ ೭ ಸಾಂಸ್ಕೃತಿಕ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ ಎಂದು ಭಾರತದ ಹೈಕಮಿಷನ್ ಹೇಳಿದೆ. 

ಇದರಲ್ಲಿ ೬ ಕಲಾಕೃತಿಗಳನ್ನು ೧೮೦೦ರ ಅವಧಿಯಲ್ಲಿ ಭಾರತದಿಂದ ಕದಿಯಲಾಗಿತ್ತು. ೭ನೆಯ ಕಲಾಕೃತಿಯ ಅದರ ಮೂಲ ಮಾಲಕರಿಂದ ಕದಿಯಲ್ಪಟ್ಟ ಬಳಿಕ ಅಕ್ರಮವಾಗಿ ಮಾರಾಟವಾಗಿತ್ತು. ಇವೆಲ್ಲವನ್ನೂ ದೇವಸ್ಥಾನ, ಪ್ರಾರ್ಥನಾ ಮಂದಿರ ಇತ್ಯಾದಿ ಪವಿತ್ರ ಸ್ಥಳಗಳಿಂದ ಲೂಟಿ ಮಾಡಿ ಗ್ಲಾಸ್ಗೋದ ಮ್ಯೂಸಿಯಂ ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು.  ಇವನ್ನು ಭಾರತಕ್ಕೆ ಮರಳಿಸುವ ಕುರಿತು ೧೮ ತಿಂಗಳು ನಡೆದ ಮಾತುಕತೆ ಯಶಸ್ವಿಯಾದ ಬಳಿಕ ಗ್ಲಾಸ್ಗೋದ ಮ್ಯೂಸಿಯಂ ಅನ್ನು ನಿರ್ವಹಿಸುತ್ತಿರುವ ಗ್ಲಾಸ್ಗೋ ಲೈಫ್ ಎಂಬ ದತ್ತಿಸಂಸ್ಥೆ ಕಲಾಕೃತಿ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಇದಕ್ಕೆ ಭಾರತದ ಹೈಕಮಿಷನ್ ಅಧಿಕಾರಿಗಳು ಕೈಜೋಡಿಸಿದ್ದರು.

ಗ್ಲಾಸ್ಗೋ ೧೯೯೮ರಿಂದ ಬ್ರಿಟನ್ನಲ್ಲಿ ವಾಪಸಾತಿ ಪ್ರಕ್ರಿಯೆಯ ನೇತೃತ್ವ ವಹಿಸಿದೆ. ಈ ಕಲಾಕೃತಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುವ ನಿಟ್ಟಿನಲ್ಲಿ ಭಾರತದ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಗ್ಲಾಸ್ಗೋ ಲೈಫ್ನ ಮ್ಯೂಸಿಯಂ ವಿಭಾಗದ ಮುಖ್ಯಸ್ಥ ಡಂಕನ್ ಡೊರ್ನಾನ್ ಹೇಳಿದ್ದಾರೆ.

ಭಾರತ, ನೈಜೀರಿಯಾ ಮತ್ತು ಅಮೆರಿಕದ ಸೌತ್ ಡಕೋಟಾ ರಾಜ್ಯದ ಬುಡಕಟ್ಟು ಜನಾಂಗದವರಿಗೆ ಸೇರಿದ ಒಟ್ಟು ೫೧ ವಸ್ತುಗಳನ್ನು ಮರಳಿಸಲು ಗ್ಲಾಸ್ಗೋ ಸಿದ್ಧವಾಗಿದೆ. ಅಟ್ಲಾಂಟಿಕ್ ಗುಲಾಮರ ವ್ಯಾಪಾರದಲ್ಲಿ ಗ್ಲಾಸ್ಗೋ ನಗರ ವಹಿಸಿದ್ದ ಪಾತ್ರಕ್ಕಾಗಿ ಮಾರ್ಚ್ನಲ್ಲಿ ನಗರ ಸಮಿತಿ ಕ್ಷಮೆ ಯಾಚಿಸಿತ್ತು. ಗ್ಲಾಸ್ಗೋದ ವಾಪಸಾತಿ ಬದ್ಧತೆಯು ಜಾಗತಿಕ ವರ್ಣಭೇದ ನೀತಿ-ವಿರೋಧಿ ಚಳುವಳಿಗಳ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ವಸ್ತುಸಂಗ್ರಹಾಲಯಗಳಲ್ಲಿನ ವಸ್ತುಗಳ ಪುರಾವೆಗಳ ವ್ಯಾಪಕ ಮರುಮೌಲ್ಯಮಾಪನದ ಭಾಗವಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News