ಸೇಡಿನ ರಾಜಕಾರಣ: ತನಿಖಾ ಸಂಸ್ಥೆಗಳ ದುರ್ಬಳಕೆ

Update: 2022-08-23 03:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತೀಯ ಜನತಾ ಪಕ್ಷ ಒಕ್ಕೂಟ ಸರಕಾರದ ಅಧಿಕಾರ ಸೂತ್ರವನ್ನು ಹಿಡಿದ ನಂತರ ಭಾರತದ ರಾಜಕೀಯ ಚಿತ್ರವೇ ಬದಲಾಗಿದೆ. ರಾಜಕೀಯ ವಿರೋಧಿಗಳನ್ನು ಮತ್ತು ಭಿನ್ನಾಭಿಪ್ರಾಯ ಹೊಂದಿದವರನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳಾದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗಳನ್ನು ಮನ ಬಂದಂತೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಚುನಾವಣಾ ಫಲಿತಾಂಶಗಳನ್ನೇ ಬದಲಿಸಲು, ಚುನಾಯಿತ ಸರಕಾರಗಳನ್ನೇ ಬುಡಮೇಲು ಮಾಡಲು ಈ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಬರೀ ಆರೋಪವಾಗಿ ಉಳಿದಿಲ್ಲ. ಬಿಜೆಪಿ ಬಿಟ್ಟು ಉಳಿದ ರಾಜಕೀಯ ಪಕ್ಷಗಳನ್ನು ನಾಮಾವಶೇಷ ಮಾಡುವ ಮಸಲತ್ತು ಅವ್ಯಾಹತವಾಗಿ ನಡೆದಿದೆ. ಇದೀಗ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಇವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಬಿಐ ಅಧಿಕಾರಿಗಳು ಶುಕ್ರವಾರ ಸಿಸೋಡಿಯ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ದಿಲ್ಲಿ ಸರಕಾರದ ಅಬಕಾರಿ ನೀತಿ-2021 ಜಾರಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಈ ಶೋಧ ಕಾರ್ಯ ನಡೆಸಿದೆ.

ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮಂತ್ರಿ ಪಾರ್ಥ ಚಟರ್ಜಿ ಅವರ ಮನೆಯ ಮೇಲೆ ದಾಳಿ ನಡೆದಿತ್ತು, ಮಹಾರಾಷ್ಟ್ರದ ಶಿವಸೇನೆಯ ನಾಯಕ ಸಂಜಯ್ ರಾವುತ್ ಮನೆಯ ಮೇಲೂ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಈಗ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಆಪ್ತ ಸಚಿವ ಸಿಸೋಡಿಯ ಮೇಲೆ ಕಣ್ಣು ಹಾಕಿದ ಮೋದಿ ಸರಕಾರ ಸಿಸೋಡಿಯ ಮನೆಯ ಮೇಲೆ ಸಿಬಿಐ ದಾಳಿ ಮಾಡಿಸಿದಾಗ ಅವರ ಮನೆಯಲ್ಲಿ ಯಾವುದೇ ಅಕ್ರಮ ಹಣ ಸಿಕ್ಕಿಲ್ಲ. ಆದರೂ ಅವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ಅತ್ಯಂತ ವ್ಯಾಪಕವಾಗಿ ಅಪಪ್ರಚಾರ ನಡೆಸಲಾಗುತ್ತಿದೆ.

ಸಿಬಿಐ ನಡೆಸಿದ ಎಲ್ಲ ಶೋಧ ಕಾರ್ಯಗಳು ನಿರರ್ಥಕವಾದ ನಂತರ ಹಾಗೂ ಒಂದೇ ಒಂದು ಪೈಸೆ ಅಕ್ರಮ ನಡೆದಿಲ್ಲ ಎಂದು ದೃಢಪಟ್ಟ ನಂತರ ಹತಾಶೆಗೊಂಡ ಸಿಬಿಐ ಸಿಸೋಡಿಯ ವಿರುದ್ಧ ಲುಕ್‌ಔಟ್ ನೋಟಿಸು ಜಾರಿ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಕೇಜ್ರಿವಾಲ್ ಸರಕಾರ ಕಳೆದ ವರ್ಷ ಅನುಷ್ಠಾನಕ್ಕೆ ತಂದಿದ್ದ ಅಬಕಾರಿ ನೀತಿಯ ಶಾಸನವನ್ನು ಈ ವರ್ಷ ರದ್ದು ಮಾಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿದರೆ ಈ ಅಬಕಾರಿ ನೀತಿಯ ಜಾರಿಗೆ ಮೋದಿ ಸರಕಾರದ ಏಜೆಂಟ್ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವಕಾಶ ನೀಡಲಿಲ್ಲ ಎಂದು ಆಮ್ ಆದ್ಮಿ ಪಕ್ಷ ದೂರಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯಿಂದ ಕಂಗಾಲಾದ ಬಿಜೆಪಿ ರಾಜಕೀಯವಾಗಿ ಅದನ್ನು ಎದುರಿಸಲಾಗದೆ ಸಿಬಿಐ ಮುಂತಾದ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಅದನ್ನು ಸದೆ ಬಡಿಯಲು ಹೊರಟಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ.

ಬಿಜೆಪಿ ಆರೋಪಿಸುವಂತೆ ಸಿಸೋಡಿಯ ಅಬಕಾರಿ ಹಗರಣದಲ್ಲಿ ಶಾಮೀಲಾಗಿದ್ದರೆ ಅದು ತನಿಖೆಯ ನಂತರ ಖಚಿತವಾಗಬೇಕು. ಆದರೆ ಕೇಂದ್ರೀಯ ತನಿಖಾ ಸಂಸ್ಥೆಗಳು ದೇಶವ್ಯಾಪಿ ಪ್ರತಿಪಕ್ಷ ನಾಯಕರ ಮನೆಗಳ ಮೇಲೆ ದಾಳಿ ಮಾಡುತ್ತ ಅದನ್ನು ಮಾಧ್ಯಮಗಳಲ್ಲಿ ಪ್ರಚಾರವಾಗುವಂತೆ ಮಾಡಿ ತೇಜೋವಧೆ ಮಾಡುತ್ತಿರುವುದು ರಾಜಕೀಯ ಎದುರಾಳಿಗಳನ್ನು ಭ್ರಷ್ಟರು ಮತ್ತು ಅಪರಾಧಿಗಳು ಎಂದು ತನಿಖೆಗೆ ಮುನ್ನವೇ ದೂಷಿಸುತ್ತಿರುವುದು ಸರಿಯಲ್ಲ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸಬೇಕು.ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಅವರ ಬಾಯಿ ಮುಚ್ಚಿಸಲು ಮಸಲತ್ತು ನಡೆಸಿರುವುದು ಸರ್ವಾಧಿಕಾರಿ ವರ್ತನೆಯಲ್ಲದೆ ಬೇರೇನೂ ಅಲ್ಲ.

ಭ್ರಷ್ಟಾಚಾರದ ಹಗರಣಗಳ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಮಾಡಬಾರದೆಂದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿರೋಧಿಗಳ ಧ್ವನಿಯನ್ನು ಅಡಗಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಅನೇಕ ಪ್ರಕರಣಗಳಲ್ಲಿ ಖಚಿತವಾಗಿದೆ. ಕೇಂದ್ರ ಗೃಹಮಂತ್ರಿ ಯಾವುದೇ ಬಿಜೆಪಿಯೇತರ ಸರಕಾರಗಳು ಇರುವ ರಾಜ್ಯಗಳಿಗೆ ಭೇಟಿ ನೀಡಿದರೆ ಅಲ್ಲಿನ ಚುನಾಯಿತ ಸರಕಾರಗಳನ್ನು ಉರುಳಿಸುವ ಮಾತುಗಳನ್ನು ಬಹಿರಂಗವಾಗಿ ಆಡುತ್ತಿರುವುದು ಸಾಮಾನ್ಯವಾಗಿದೆ.
ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ದಳ ದಂಥ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳ ಹಾಗೂ ಸಂಘಪರಿವಾರದ ಕೋಮುವಾದಿ ನೀತಿಯ ಕಟು ಟೀಕಾಕಾರರನ್ನು ಹಣಿಯಲು ಬಳಸಿಕೊಳ್ಳುತ್ತಿರುವುದು ಈಗ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ.ಆಡಳಿತ ಪಕ್ಷದಲ್ಲಿ ಹಗರಣಗಳ ವೀರರೇ ತುಂಬಿದ್ದರೂ ಅವರಿಗೆ ರಕ್ಷಣೆ ನೀಡಿ ದಿನ ಬೆಳಗಾದರೆ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಈ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಪಾಯಕಾರಿ ಕ್ರಮವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಈ ರೀತಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಜನಸಾಮಾನ್ಯರು ಅವುಗಳ ಮೇಲೆ ಸಂದೇಹ ಪಡಲಾರಂಭಿಸಿದರೆ ಅದು ಆಡಳಿತ ಪಕ್ಷಕ್ಕೆ ತಿರುಗುಬಾಣವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಸಿಸೋಡಿಯ ಪ್ರಕರಣದಲ್ಲಿ ಅವರು ತಪ್ಪುಮಾಡಿದ್ದರೆ ಖಚಿತ ಪುರಾವೆಗಳನ್ನು ನೀಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅಭ್ಯಂತರವಿಲ್ಲ. ಆದರೆ ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಮ್ ಆದ್ಮಿ ಪಕ್ಷವನ್ನು ಅಪಖ್ಯಾತಿಗೆ ಗುರಿಪಡಿಸುವ ಉದ್ದೇಶದಿಂದ ಈ ದಾಳಿ ನಡೆದಿದ್ದರೆ ಅದು ಜನತಂತ್ರಕ್ಕೆ ಅಪಚಾರ ಮಾಡಿದಂತೆ.
ಆಮ್ ಆದ್ಮಿ ಬಿಟ್ಟು ಬಿಜೆಪಿ ಸೇರಿದರೆ ಪ್ರಕರಣ ಕೈ ಬಿಡುವುದಾಗಿ ಸಂದೇಶ ಬಂದಿದೆ ಎಂದು ಸಿಸೋಡಿಯ ಹೇಳಿದ್ದಾರೆ. ಇಂತಹ ಸಂದೇಶಗಳು ಹಿಂದೆಯೂ ಅನೇಕರಿಗೆ ಬಂದಿರುವುದು ಜನಜನಿತ. ಮಧ್ಯಪ್ರದೇಶ ಕಾಂಗ್ರೆಸ್ ಸರಕಾರದ ಪತನ, ಕರ್ನಾಟಕದ ಕುಮಾರಸ್ವಾಮಿ ಸರಕಾರ ಬಹುಮತ ಕಳೆದುಕೊಂಡಾಗ ಇಂಥದೇ ಕಸರತ್ತು ನಡೆದಿದೆ ಎನ್ನಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ದುರಂತವಲ್ಲವೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News