ಸ್ಕಾಟ್ಲೆಂಡ್‍ನಲ್ಲಿ ಅಪಘಾತ: ಮೂವರು ಭಾರತೀಯರು ಮೃತ್ಯು

Update: 2022-08-23 02:05 GMT

ಲಂಡನ್: ಲೀಸ್ಟರ್ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು ಮತ್ತು ಅದೇ ಸಂಸ್ಥೆಯಿಂದ ಪದವಿ ಪಡೆದ ವ್ಯಕ್ತಿಯೊಬ್ಬರು ಸೇರಿದಂತೆ ಮೂರು ಮಂದಿ ಭಾರತೀಯರು ಪಶ್ಚಿಮ ಸ್ಕಾಟ್ಲೆಂಡ್‍ನಲ್ಲಿ ನಡೆದ ಕಾರು- ಲಾರಿ ಢಿಕ್ಕಿ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಇದೇ ವಿಶ್ವವಿದ್ಯಾನಿಲಯದ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ತೀವ್ರ ಗಾಯಗೊಂಡು, ಜೀವನ್ಮರಣ ಸ್ಥಿತಿಯಲ್ಲಿದ್ದಾನೆ.

ಗಿರೀಶ್ ಸುಬ್ರಹ್ಮಣ್ಯನ್ (23) ಬೆಂಗಳೂರಿನವನು ಎನ್ನಲಾಗಿದ್ದು, ಪ್ರವೀಣ್ ಬಾಶೆಟ್ಟಿ (23) ಹಾಗೂ ಸಾಯಿ ವರ್ಮಾ ಚಿಚಕುಮಾರಿ (24) ಹೈದರಾಬಾದ್‍ನವರ. ಸುಧಾಕರ್ ಮೋದೆಪಲ್ಲಿ (30) ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯವರು. ಇವರು ಸ್ಕಾಟ್ಲೆಂಡ್‍ಗೆ ರಜಾವಿಹಾರಕ್ಕಾಗಿ ಬಂದಿದ್ದರು ಎನ್ನಲಾಗಿದೆ. ಕಳೆದ ಶುಕ್ರವಾರ ಈ ದುರಂತ ಸಂಭವಿಸಿದೆ.

ಗಿರೀಶ್, ಪವನ್ ಮತ್ತು ಸಾಯಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾಗಿದ್ದರೆ, ಸುಧಾಕರ್ ಈಗಾಗಲೇ ಪದವಿ ಪಡೆದು ಲೀಸ್ಟರ್‍ನಲ್ಲಿ ಉದ್ಯೋಗದಲ್ಲಿದ್ದಾರೆ. ಸಿಲ್ವರ್ ಹೋಂಡಾ ಸಿವಿಕ್ ಮತ್ತು ಕಪ್ಪು ಬಣ್ಣದ ಎಚ್‍ಜಿವಿ ವಾಹನಗಳು ಎ828 ಒಬಾನ್‍ನಿಂದ ಫೋರ್ಟ್ ವಿಲಿಯಂಗೆ ಹೋಗುವ ಮಾರ್ಗದಲ್ಲಿ ಪರಸ್ಪರ ಢಿಕ್ಕಿ ಹೊಡೆದಿವೆ ಎಂದು ಪೊಲೀಸರು ಹೇಳಿದ್ದಾರೆ.

ಗಿರೀಶ್, ಪವನ್ ಮತ್ತು ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಸಾಯಿಯನ್ನು ಗ್ಲಾಸ್ಗೊ ಕ್ವೀನ್ ಎಲಿಜಬೆತ್ ವಿಶ್ವವಿದ್ಯಾನಿಲಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾಯಿ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗಿದೆ. ಲಾರಿ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಈ ಘಟನೆ ಬಳಿಕ 12 ಗಂಟೆ ಕಾಲ ರಸ್ತೆ ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News